ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಸೆಳೆತ

( ಯಂಡಮೂರಿ ವೀರೇಂದ್ರನಾಥ್ ಅವರ ಒಂದು ಕಾದಂಬರಿಯಲ್ಲಿ ಬರುವ  ಸನ್ನಿವೇಷವನ್ನು ನನ್ನದೇ ರೀತಿಯಲ್ಲಿ ಕಥೆಯಾಗಿ ನಿರೂಪಿಸುವ ಒಂದು ಪ್ರಯತ್ನ.)

ಟ್ರೈನ್ ನ ಕಿಟಕಿಗೆ ತಲೆ ಆನಿಸಿ ನಿಶ್ಚಲವಾಗಿ ಕುಳಿತಿದ್ದ ನಿಖಿತಳ ದ್ರಷ್ಟಿ ವೇಗವಾಗಿ ಹಿಂದೋಡುತ್ತಿರುವ ಆ ಮರಗಳ ಮೇಲೆ ಇತ್ತು. ಅದು ಭಾವರಹಿತವಾದ  ನಿಶ್ಚಿಂತೆಯಿಂದ ಕೂಡಿದ ದೃಷ್ಟಿ . ಮನಸ್ಸಿನಲ್ಲಿ ನೀರವತೆ. ಒಂದು ದೊಡ್ಡ ಪ್ರವಾಹ ಬಂದು...ಆ ಪ್ರವಾಹ ಇಳಿದು ಹೋದ ಮೇಲೆ ಇರುವಂತಹ ಸ್ತಬ್ಧತೆ . ಅಮ್ಮ ಎಂಬ ಕೂಗಿಗೆ ಇಹಲೋಕಕ್ಕೆ ಬಂದಂತಾಗಿ ಪಕ್ಕ ತಿರುಗಿ ನೋಡಿದಳು. ನಿಖಿತ ಳ 2 ವರ್ಷದ ಮಗಳು ನಿದ್ದೆಗಣ್ಣಿನಲ್ಲೇ ಅಮ್ಮನನ್ನು ಕರೆಯುತ್ತಿದ್ದಳು. ಅವಳ ತಲೆ ಸವರಿ ಮತ್ತೆ ಮಲಗಿಸಿ, ಹಾಗೇ ಹೊರಗೆ ನೋಡುತ್ತಾ ಕುಳಿತಳು.  ಬೇಡವೆಂದು ಓಡಿಸಿದ್ದ ಆ ಯೋಚನೆಗಳು ಮತ್ತೆ ಮನದೊಳಗೆ ಸುಳಿಯಲಾರಂಬಿಸಿದವು.         ' ಎಷ್ಟು ಸುಂದರ ಸಂಸಾರ ತನ್ನದು. ಮುತ್ತಿನಂತ ಇಬ್ಬರು ಮಕ್ಕಳು. ಒಳ್ಳೆ ಉದ್ಯೋಗದಲ್ಲಿದ್ದು ಚೆನ್ನಾಗಿ ಸಂಪಾದನೆ ಮಾಡುತ್ತಿರುವ ಗಂಡ, ಸ್ವಲ್ಪ ಜಾಸ್ತಿ practical ಆದರೂ ಕೂಡ...ಅವಶ್ಯಕತೆಗನುಗುಣವಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ದಾಂಪತ್ಯ ಜೀವನ ಚೆನ್ನಾಗೆ ಇತ್ತಲ್ಲ.. ಅದ್ಯಾಕೆ ಹೀಗಾಯ್ತು ತನಗೆ....? ಎಂದೂ ತನ್ನ ಮನಸ್ಸನ್ನ ಬೇಕಾಬಿಟ್ಟಿ ಹರಿಯಬಿಟ್ಟವಳಲ್ಲ ತಾನು.  ಸಮಂಜಸವೆನಿಸಿದ ವಿಷಯದಲ್ಲಷ್ಟೇ ಮನಸ್ಸು ಹರಿಸಿದವಳು . ಈಗ್ಯಾಕೆ ಹೀಗಾಯ್ತು... ? ಕಾಲೇಜ್ ನಲ್ಲೇ ಕೆಲವು ಹುಡುಗರು ನಿನ್ನನ್ನು ಪ್ರೀತಿಸುತ್ತೇನೆಂದು ಪ್ರೇಮ ಪತ್ರ ತಂದು ಕೈಗಿತ್ತಾಗಲೂ ಯಾರ ಮೇಲೆಯೂ ನನಗೆ ಆಕರ್ಷಣೆ ಮೂಡಿರಲಿಲ್ಲ. ಅಪ್ಪ ಅಮ್ಮ ತೋರಿಸಿದ ಹುಡುಗನನ್ನೇ ಮದುವೆಯಾಗಿ ಇಬ್ಬರು ಮುತ್ತಿನಂಥ ಮಕ್ಕಳಾಗಿ ನೆಮ್ಮದಿಯ ಜೀವನ ನಡೆಸುತ್ತಿರುವಾಗ  ಬಿರುಗಾಳಿಯಂಥ ಭಾವನೆಗಳ್ಯಾಕೆ ಶುರುವಾಯ್ತು.


ಇದೆಲ್ಲಾ ಶುರುವಾಗಿದ್ದು ಈಗ 4 ತಿಂಗಳುಗಳ ಹಿಂದೆ. ನನ್ನ ಗಂಡನ ಮನೆಯ ಪರಿಚಯದ ಹುಡುಗ ನನ್ನ ಗಂಡನ ಕಂಪನಿ ಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ. ನಮ್ಮ ಅಪಾರ್ಟ್ಮೆಂಟ್ ನಲ್ಲೇ ಪಕ್ಕದ ಫ್ಲಾಟ್ ಖಾಲಿ ಇದ್ದುದರಿಂದ ಅಲ್ಲೇ ಆತನ ವಾಸ್ತವ್ಯ ಶುರುವಾಯ್ತು. ಶುರುವಿನಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತ ಮತ್ತು ನನ್ನ ಗಂಡ ಒಟ್ಟಿಗೆ ಕೆಲಸಕ್ಕೆ ಹೋಗುವುದು ಬರುವುದು ವಾಡಿಕೆಯಾಯ್ತು. ಹಾಗೆ ಆತನಿನ್ನೂ ಅವಿವಾಹಕ ನಾದ್ದರಿಂದ ಆಗಾಗೆ ಊಟಕ್ಕೆ ಕರೆಯೋದು , weekend ಗಳಲ್ಲಿ ಒಟ್ಟಾಗಿಯೇ ಹೊರಗೆ ಸುತ್ತಲು ಹೋಗುವುದು..ಅದೆಲ್ಲವೂ ಚೆನ್ನಾಗೇ ಇತ್ತಲ್ಲ .... ಆದರೆ ಯಾವುದೋ ಒಂದು ಒಳ್ಳೆಯದಲ್ಲದ ಗಳಿಗೆಯಲ್ಲಿ ನನಗೇ ಅರಿವಿಲ್ಲದಂತೆ  ಆತನ ಬಗ್ಗೆ ನನಗಿರುವ ಮೆಚ್ಚುಗೆಯ ಭಾವನೆ ಬೇರೆ ರೂಪ ಪಡೆದುಕೊಳ್ಳುತ್ತಿತ್ತು. ಆತ ನನ್ನ ಗಂಡನಿಗಿಂತ ಸುಂದರನೆನಲ್ಲ. ಆದರೆ ಅಪರೂಪದ ವ್ಯಕ್ತಿತ್ವವಿರುವಂಥ ವ್ಯಕ್ತಿ. ಆತನ ಆ ಸಹನಶೀಲತೆ ,  ಸ್ನೇಹಪರತೆ, ಉದಾರತನ, ಎಲ್ಲಕ್ಕಿಂತ ಹೆಚ್ಚಾಗಿ ಆತನಲ್ಲಿನ ಆ ನೈಜತೆ ...ನಂಗೆ ಅವನ ಬಗ್ಗೆ ತುಂಬಾ ಮೆಚ್ಚುಗೆ ಮೂಡಲು ಕಾರಣ. ಆದರೆ ಆ ಮೆಚ್ಚುಗೆಯ ಭಾವನೆ ಒಲವಾಗಿ ಬದಲಾದದ್ದು  ಯಾವಾಗ ಅಂತಲೇ ತಿಳಿಯಲಿಲ್ಲವಲ್ಲ. ಬಹುಶ : ಸ್ತ್ರೀಯರ ಮೇಲೆ ಆತನಿಗಿರುವ ಉನ್ನತ ಗೌರವ , ಕಾಳಜಿಗಳಾ ನನ್ನ ಮನಸ್ಸನ್ನು ಬಲಹೀನವನ್ನಾಗಿ ಮಾಡಿದ್ದು..ಅಥವಾ ಆ ವಾಕ್ಚಾತುರ್ಯವಾ...? ಏನೋ ಗೊತ್ತಾಗಲೇ ಇಲ್ಲ .....ಮದುವೆಗೆ ಮುಂಚೆ ಈ ತರದ ಭಾವನೆಗಳು ಮೂಡಿದ್ದರೆ.....ಅದು ಸುಂದರ ಕಾವ್ಯವಾಗಬಹುದಿತ್ತು .....!!        ಆದರೆ ಈಗ ಮೂಡಿರುವುದು ದುರಂತಕ್ಕೆ ಮುನ್ನುಡಿಯಂತಲ್ಲವೇ ..?   ತಿಂಗಳುಗಳ ಕಾಲ ಆತನ ಬಗ್ಗೆ ನನಗೆ ಮೂಡುತ್ತಿರುವ ಭಾವನೆಗಳನ್ನು ಹೊಡೆದೋಡಿಸಲು ಒದ್ದಾಡಿಬಿಟ್ಟಿದ್ದೆ. ರಾತ್ರಿ ಮಲಗಿದರೂ ನಿದ್ದೆಯ ಬದಲು ಆತನ ಯೋಚನೆಗಳೆ ಬರುತ್ತಿತ್ತಲ್ಲ. ದು:ಖಿತ ಮನಸ್ಸನ್ನು ಶಾಂತಗೊಳಿಸಲಾರದೇ ಸರಿ ತಪ್ಪುಗಳ ತುಲನೆಯಲ್ಲೇ ಬೆಳಗು ಹರಿಸುತ್ತಿದ್ದೆ.  ಗಂಡನ ಪಕ್ಕದಲ್ಲಿ ಮಲಗಿ ಬೇರೋಬ್ಬಾತನ ಬಗೆಗೆ ಯೋಚಿಸುತಿದ್ದ ನನ್ನ ಮನಸ್ಸನ್ನು ಹಿಡಿತದಲ್ಲಿಡಲಾಗದೆ ನನ್ನ ವಿವೇಚನೆ, ನೈತಿಕ ಮೌಲ್ಯಗಳೆಲ್ಲ ಮನದ ಮೂಲೆಗೆ ಸೇರಿಬಿಟ್ಟಿದ್ದವಲ್ಲ.  ಬೇಡ ಹೋಗೆಂದು ಮನದ ಹೊರ ಹಾಕಿ ಕದ ಮುಚ್ಚಿದರೂ ನುಗ್ಗಿ ಬರುವ ಆತನ ನೆನಪು ನನ್ನನ್ನು ತುಂಬಾ  ಕೆಳಗಿಳಿಸಿಬಿಟ್ಟಿತ್ತು.  ಬೇರೆಯವರಲ್ಲಿ ಹೇಳಿಕೊಳ್ಳಲಾರದಂಥ , ನನಗೆ ನಾನೇ ಸಹ್ಯವಾಗದಿರುವಂತ  ಆ ಯಾತನೆಗೆ ಸಿಕ್ಕಿ ನರಳಾಡಿಬಿಟ್ಟೆ.  ಅಷ್ಟರಲ್ಲೇ, ತುಂಬಾ ಸೂಕ್ಷ್ಮಮತಿಯಾದ ಆತ, ನನ್ನ ಮನಸ್ಸಿನಲ್ಲಿನ ಭಾವನೆಗಳನ್ನು ಓದಿಬಿಟ್ಟಿರಬಹುದಾ...ಅನ್ನಿಸಿತ್ತಲ್ಲ.   ಹಾಗೇನಾದರೂ ಆಗಿ, ಅವನಲ್ಲಿ ನಾನು ಗೊಂದಲ ಮೂಡಿಸಿದ್ದರೆ .....ಶುಭ್ರ ಶಾಂತ ಕೊಳದಲ್ಲಿ ಕಲ್ಲೆಸೆದು ಹುಚ್ಚು ಅಲೆಗಳನ್ನೆಬ್ಬಿಸಿದಂತೆ !.  ಆ ಪಾಪವನ್ನೂ ನಾನು ಮಾಡಿಬಿಟ್ಟೆನಾ ಎಂದು ನೋವು ಪಟ್ಟಿದ್ದೆ.   ಹಾಗೇನಾದರೂ ಆಗಿದ್ದಲ್ಲಿ  ಆ ಸ್ನೇಹವೂ ಕಡಿದುಹೋಗುವುದಲ್ಲಾ...ಎಂದು ಕೊರಗಿದ್ದೆ.


ಅಷ್ಟರಲ್ಲೇ, ನನ್ನ ಮಾನಸಿಕ ನರಳಾಟ ನೋಡಲಾರದೇ ದೇವರೇ ಕಳುಹಿಸಿ ಕೊಟ್ಟಂತೆ ಬಂದಿತ್ತು ಆ interview letter. ನನ್ನ ಗಂಡನಿಗೆ ಇನ್ನೊಂದು ಕಂಪನಿಯಲ್ಲಿ ಒಳ್ಳೆಯ ಹುದ್ದೆಗೆ ಇಂಟರ್ವ್ಯೂ ಬಂದಾಗ ನನಗೊಂದು ಜೀವ ಸೆಲೆ ಸಿಕ್ಕಷ್ಟೂ ಸಂತೋಷವಾಗಿತ್ತು.  ಆದರೆ ಪ್ರಸ್ತುತ ಕಂಪನಿ ಯಲ್ಲಿ career growth ಚೆನ್ನಾಗಿದೆ ಎಂಬ ಕಾರಣಕ್ಕೆ ನನ್ನ ಗಂಡ ಬೇರೆ ಕಂಪನಿ ಸೇರಲು ಸಿದ್ದನಿರಲಿಲ್ಲ. ಆಗ ನಾನು ನಡೆದುಕೊಂಡ ರೀತಿ  ನನ್ನ ಗಂಡನಿಗೆ ವಿಚಿತ್ರವೆನಿಸಿರಬೇಕು. ನಾನು ಬೇರೆ ಕಂಪನಿ ಸೇರಲೇಬೇಕೆಂದು ಹಠ ಹಿಡಿದಿದ್ದೆ. ಅತ್ತು ಕರೆದು ರಂಪ ಮಾಡಿದ್ದೆ.  ಬೇರೆ ಕಂಪನಿ ಸೇರದಿದ್ದಲ್ಲಿ ನನ್ನ ಜೊತೆಗೆಂದೂ ಮಾತನಾಡಬೇಡಿ ಎಂದು ಜಗಳವಾಡಿದ್ದೆ.


ಅಂತೂ ನನ್ನ ಒತ್ತಾಯಕ್ಕೆ ಮಣಿದು ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಯಾಯ್ತು. ನನ್ನ ಮನಸ್ಸು ತುಂಬಾ ನಿರಾಳವಾಗಿತ್ತು. ಅದಲ್ಲದೆ ಮನಸ್ಸಿನ ಹತೋಟಿಗೆ ಪ್ರಯತ್ನಿಸುತ್ತಾ ಒಳ್ಳೆಯ ಪುಸ್ತಕಗಳ ಮೊರೆ ಹೋಗಿದ್ದೆ. ದೇವರ ಧ್ಯಾನವನ್ನು ಹೆಚ್ಚಿಸಿದ್ದೆ. ಅಂತೂ ಹೇಗೋ ಮೋಹದ ಮಾಯೆಯ ಸುಳಿಯಲ್ಲಿ ಸಿಕ್ಕಿಬಿದ್ದ ಮನಸ್ಸನ್ನು ಆ ಬಲೆಯಿಂದ ಹೊರಗೆಳೆದು ತಂದಿದ್ದೆ.  ಮೂರ್ಖ ಮನಸ್ಸಿಗೆ ಬುದ್ದಿಹೇಳಿದ್ದೆ.   ಈಗ ಆ  ಊರನ್ನು ಬಿಟ್ಟು ದೂರದೂರಿಗೆ ಹೋಗುತ್ತಿದ್ದೇವೆ.     ನಾಳೆಯಿಂದ ಹೊಸ ಊರು, ಹೊಸ ಮನೆ, ಹೊಸ ಗಾಳಿ, ಹೊಸ ಬೆಳಕು.  ಹೊಸ ಜೀವನವನ್ನು ಪ್ರಾರಂಭಿಸುವ ಉತ್ಸಾಹವಿದೆ.  ಬಿರುಗಾಳಿಯ ರಭಸಕ್ಕೆ ಸಿಕ್ಕಿ ಮುದುಡಿ ಹೋದ ಮೊಗ್ಗನ್ನು ..ಮತ್ತೆ ನೀರೆರೆದು ಹೂವಾಗಿಸಿ ನಗಿಸುವ ಆಸೆಯಿದೆ.  ಎಲ್ಲವನ್ನೂ ಶುರುವಿನಿಂದ ಶುರು ಮಾಡಬೇಕೆನಿಸಿದೆ.


ಎಲ್ಲರ ಜೀವನದಲ್ಲಿಯೂ ಇಂಥದೊಂದು ದುರ್ಬಲ ಕ್ಷಣ ಬರುತ್ತಾ...? ಅಥವಾ ನನ್ನ ಮನಸ್ಸೋಂದೇ ಈ ತರದ ಹುಚ್ಚು ಕುದುರೆಯಾಗಿದ್ದಾ..? ಎಂಬ ಯೋಚನೆ  ಕಾಡುತ್ತಿದೆ ಈಗ..!


ಮನಸ್ಸನ್ನು ನಿರಾಳವಾಗಿಸಿಕೊಂಡು...ಕೆಲವೊಮ್ಮೆ ಅದಾಡುವ ಹುಚ್ಚಾಟದ ಬಗ್ಗೆ ನಗುವಷ್ಟರ ಮಟ್ಟಿಗೆ ಬೆಳೆದಿದ್ದೇನೆ ..! '


" ನಿಖಿತಾ ......ಊರು ತಲುಪಿಯಾಯ್ತು ಎದ್ದೇಳು.." ಎಂಬ ಮಾತುಗಳಿಗೆ ಕಣ್ ತೆರೆದವಳು.....ಮುಂದೆ ನಿಂತಿದ್ದ ಗಂಡ ಮಕ್ಕಳೆಡೆಗೆ  ತುಂಬು ಮನಸಿನಿಂದ ಆತ್ಮೀಯವಾಗಿ  ನಕ್ಕಾಗ....ಆ ನಗುವಿನರ್ಥ ಅವಳಿಗಷ್ಟೆ ತಿಳಿದಿತ್ತು.
-----ಇದು ಕಾಲ್ಪನಿಕ ಕಥೆ

10 comments:

Ranjita March 26, 2010 at 11:01 AM  

ಮನಸು ಅಂದ್ರೆ ಹಾಗೆ ಅಲ್ವಾ ! ಇರೋದನ್ನ ಬಿಟ್ಟು ಇಲ್ದೆ ಇರೋ ಕಡೆ ಓಡೋದು ... ಹೌದು ಒಮ್ಮೊಮ್ಮೆ ಜೀವನದಲ್ಲಿ ಇಂಥ ಕೆಟ್ಟ ಆಲೋಚನೆಗಳು ಬಂದು ಬಿಡತ್ವೆ ... ಚೆನ್ನಾಗಿದೆ ನಿಮ್ಮ ಕೆತೆ ಮತ್ತು ನೀವು ರೂಪಿಸಿದ ರೀತಿ .. ಹೀಗೆ ಮುಂದ್ವರಿಲಿ :)

sathish kulal March 26, 2010 at 3:24 PM  

very nice story....

ಮನಮುಕ್ತಾ March 26, 2010 at 10:49 PM  

ಕಥೆ ಚೆನ್ನಾಗಿದೆ..ಕಥೆಯನ್ನು ಸರಿಯಾದ ರೀತಿಯಲ್ಲಿ ಅ೦ತ್ಯಗೊಳಿಸಿದ್ದೀರಿ.
ಹಿಡಿಸಿತು.

ಚುಕ್ಕಿಚಿತ್ತಾರ March 27, 2010 at 8:21 AM  

nice story and narration...
keep it up

ಮನದಾಳದಿಂದ March 27, 2010 at 9:19 PM  

ಓ ಮನಸೇ...... ನೀನೇಕೆ ಹೀಗೆ? ನಿನ್ನ ರೀತಿ ರಿವಾಜು ಅರ್ಥವೇ ಆಗುವುದಿಲ್ಲವಲ್ಲ. ಯಾಕೆ ಮನಸು ಇಷ್ಟೊಂದು ದುರ್ಬಲ?
ಕೊನೆಗೂ ಮನಸಿನ ಮಾಯೆಗೆ ಸೋಲದೆ ಬುದ್ಧಿಯೇ ಗೆದ್ದಿತಲ್ಲ. ಸರಿಯಾದ ಅಂತಿಮ ನಿರ್ಧಾರ. ಒಳ್ಳೆ ಕತೆ.

ಸಿಮೆಂಟು ಮರಳಿನ ಮಧ್ಯೆ March 29, 2010 at 8:33 AM  

ಓದುಗರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ...
ಭಾವಗಳು ಬಲು ಸುಂದರವಾಗಿ ವ್ಯಕ್ತವಾಗಿವೆ...

ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...

ಇನ್ನಷ್ಟು ಕಥೆ ಬರಲಿ...

ಗುರು-ದೆಸೆ !! March 29, 2010 at 11:27 PM  

'ಓ ಮನಸೇ, ನೀನೇಕೆ ಹೀಗೆ...?'-

ಮನಸ್ಸಿನ ಹಿಡಿತಕ್ಕೆ ಪ್ರಯತ್ನವಿರಲಿ..

ಇಂತಹದೇ ಒಂದು ನೈಜಕಥೆ ಇತ್ತೀಚಿಗಷ್ಟೇ ಓದಿದ್ದೇನೆ,ಆ ಕಥೆಯ ಕಥಾನಾಯಕಿಯ ಸ್ಥಿತಿ ಹೇಳತೀರದು...ಇದನ್ನು ದಯವಿಟ್ಟು ಓದಿ:http://manasaaree.blogspot.com/2010/03/blog-post_26.html


ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

kuusu Muliyala April 5, 2010 at 6:18 PM  

ಮನಸ್ಸು ಬುದ್ದಿಯ ಹಿಡಿತದಲ್ಲಿದ್ದಗಲೇ ನಿಯ೦ತ್ರಣ ಸಾದ್ಯ ಅಲ್ವೇ? ಸೊಗಸಾದಶೈಲಿ ನಿಮ್ಮದು .ಅಬಿನ೦ದನೆಗಳು.

ಓ ಮನಸೇ, ನೀನೇಕೆ ಹೀಗೆ...? April 9, 2010 at 9:19 AM  

ಕತೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು ... ಈ ಕಥೆ ಯಂಡಮೂರಿ ವೀರೇಂದ್ರನಾಥ ಅವರ ಒಂದು ಕಾದಂಬರಿಯಿಂದ ಪ್ರೇರೇಪಿತಗೊಂಡು ಬರೆದಿರುವುದಾದ್ದರಿಂದ ಅವರಿಗೂ ಒಂದು ಸಲಾಮ್.

PaLa April 13, 2010 at 5:55 AM  

ತುಂಬಾ ವಾಸ್ತವಿಕತೆಯ, ಚೆಂದದ ಅಂತ್ಯದ ಕಥೆ..

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com