ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?


ಚಿತ್ರಗಳು : ಶಶಿಧರ್ ಬಂಗೇರ.



ಮುಗ್ಧ ಕಂಗಳ ತೆರೆದು
ಜಗವ ದಿಟ್ಟಿಸುತಿರುವ
ಈ ಪುಟ್ಟ ಬಾಲರಿಗೂ
ಕನಸುಗಳಿವೆಯೇ ?

ಬಾಲ್ಯವೇ ಬರಡಾಗಿರುವಾಗ
ಬೃಂದಾವನವೇಲ್ಲಿಯದು
ಚಿಕ್ಕ ಪುಟ್ಟ ಆಸೆಗಳಿಗಾದರೂ 
ಆಸರೆಯಿದೆಯೇ ?

ಆಟಿಕೆಗಳ ಆಸೆಯಲ್ಲ
ಮಹಲು ಮನೆಗಳದಲ್ಲ
ಕಾಣಿಸದೇ ಆ  ಕಂಗಳ ಆಸೆ
ತಿನ್ನೋ ಹಣ್ಣುಗಳಿಗಾಗಿ...
ಗಾಜಿನೊಳಗಿನ ಆ 
ಸಿಹಿ ತಿಂಡಿಗಳಿಗಾಗಿ...

ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ  ಉಡುಪಿಗಾಗಿ.

ಮುಗಿಲೆತ್ತರಕ್ಕಿಲ್ಲ..
ಈ ಮುಗ್ಧ ಬಾಲರ ಕನಸು
ಹರಡಿಕೊಂಡಿವೆ ಇಲ್ಲೇ ಅನಾಥವಾಗಿ
ಕಾರು ಬೈಕು ಬೇಕೆಂದಲ್ಲ ಈ ಮಕ್ಕಳಾ ಕೂಗು 
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..

(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com