ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಬಿಟ್ಟು ಹೋದೆಯಾ ಗೆಳೆಯಾ

ಬಿಟ್ಟು ಹೋದೆಯಾ ಗೆಳೆಯಾ ನಟ್ಟ ನಡುದಾರಿಯಲಿ
ಕತ್ತಲದು ಕವಿಯುತಿದೆ ಮನದ ತುಂಬಾ
ಮತ್ತೆ ಬೆಳಗುವುದಿಲ್ಲ ಪ್ರೇಮ ಜ್ಯೋತಿಯು ಇಲ್ಲಿ
ಆರಿಸಿದ ಕಟುಹೃದಯಿ ನೀನಾದೆಯಲ್ಲ

ಗಮ್ಯವದು ದೂರವಿದೆ, ಚೈತನ್ಯ ಅಡಗುತಿದೆ
ಹೇಗೆ ಸವೆಸಲಿ ಈ ದಾರಿಯನು  ಒಂಟಿಯಾಗಿ
ನಡುದಾರಿಯಲಿ ನಿಂತೀಗ ದಿಶೆ ತಪ್ಪಿ ಹೋಗಿದೆ.
ಪಯಣಿಸುವ ಛಲ ಕೂಡ ಕ್ಷೀಣಿಸುತಿದೆಯಲ್ಲ

ಚಂದದ ಕನಸಿನಲ್ಲಿ ಪುಟ್ಟ ಮನೆಯೊಂದಿತ್ತು
ಮುಂದೊಂದು ಹೂದೋಟ ಮೀನುಕೊಳ ಜೊತೆಗೆ.
ಪ್ರೇಮದಾ ಆ ಗೂಡಿನಲಿ ಜೋಡಿ ಹಕ್ಕಿಗಳಾಗಿ
ತನುವೆರಡು ಉಸಿರೊಂದು ಎನುವ ಹಾಡಿತ್ತು

ಆ ಪ್ರೇಮನಗರಿಯಲಿ ಪ್ರೀತಿಯಾ ಸೂರಿನಡಿ
ಹತ್ತು ಮಕ್ಕಳ ಪಡೆವ ಆಸೆ ಚೆನ್ನಿತ್ತು
ಈ ಬಾಳ ಪಯಣದ ಕೊನೆಯ ಹೆಜ್ಜೆಯವರೆಗೆ
ಜೊತೆಯಾಗೆ ನಡೆಯುವ ಭಾಷೆ ನಮದಿತ್ತು.

ಹೇಗೆ ಮರೆತೇ ಹುಡುಗಾ ನಿನ್ನದೇ ಮಾತುಗಳು
ಪ್ರತಿಧ್ವನಿಸುತಿದೆ ನನಗಿನ್ನೂ ಮನದ ತುಂಬಾ
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ

ನೂರು ಪ್ರಶ್ನೆಗಳು ಬಂದು ಮನವನ್ನು ಕಾಡುತಿವೆ
ಉತ್ತರಿಸುವ ಇಚ್ಛೆ ನಿನಗಿಲ್ಲವಲ್ಲ
ಅಚ್ಚರಿಯಾಗುತಿದೆ........
ಈತನೆನಾ ನಾ ಮೆಚ್ಚಿ ಮನಸು ಕೊಟ್ಟಿದ್ದು ?
ಎಂದಿಗೂ ನೀನೊಂದು ಪ್ರಶ್ನೆಯಾಗಿಬಿಟ್ಟೆಯಲ್ಲ

ನೀ ಕಟ್ಟಿದರಮನೆಯ ನೀನೆ ಕೊಡವಿದೆಯಲ್ಲ
ಆ ಮನಸ್ಯಾಕೆ ಕಲ್ಲಾಯ್ತೋ ನಾನರಿಯೇ ಹುಡುಗಾ
ಕನಸ ಕಂಗಳ ತುಂಬಾ ನೋವು ತುಂಬಿದೆ ಈಗ
ಚೂರಾದ ಕನಸುಗಳು ಇರಿಯುತಿವೆಯಲ್ಲ   

  ***********************

ಪ್ರೀತಿಯ ತಂಗಿಗೆ ಶುಭ ಹಾರೈಕೆ.

ನಾಳೆ ನನ್ನ  ಪ್ರೀತಿಯ ತಂಗಿಯ ಮದುವೆ . ಅವಳ ಬಾಳಿಗೊಂದು ಸಂಗಾತಿ ಬಂದು ಹೊಸ ಜೀವನ ಪ್ರಾರಂಬಿಸುವ,  ಜೀವನದಲ್ಲಿ ಒಮ್ಮೆ ಮಾತ್ರ ಬರುವಂತ ಅತಿ ಮುಖ್ಯ ದಿನ . ಆದ್ರೆ ನನಗೆ ಈ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ತುಂಬಾ ಬೇಜಾರೆನಿಸುತ್ತಿದೆ.  ನನ್ನ ಮನಸೆಲ್ಲ ಮದುವೆ ಮನೆಯಲ್ಲೇ ಇದೆ. ತಾಸಿಗೊಮ್ಮೆ ಫೋನ್ ಮಾಡಿ ಇಲ್ಲಿಂದಲೇ ಮದುವೆಯಲ್ಲಿ ಪಾಲ್ಗೊಳ್ಳುವ ಸಣ್ಣ ಪ್ರಯತ್ನಮಾಡ್ತಾ ಇದೀನಿ.

ಈಗಿನ್ನೂ ನನ್ನ ತಂಗಿಯನ್ನು (ಚಿಕ್ಕಪ್ಪನ ಮಗಳು) ಎತ್ತಿ ಮುದ್ದಾಡುತ್ತಾ ಊರೆಲ್ಲ ತಿರುಗಿಸುತ್ತಿದ್ದ ದೃಶ್ಯ ಕಣ್ ಮುಂದೆಯೇ ಇದೆ. ಒಂದೇ ಮನೆಯಲ್ಲಿ ಒಟ್ಟಾಗಿ ಬೆಳೆಯುವಾಗ ಆಡಿದ ಆಟ, ಆಟದ ನಂತರದ ಜಗಳ, ಜಗಳದ ನಂತರ ಮತ್ತೆ ಒಂದಾಗುವುದು..ಆ ದಿನಗಳು ಇನ್ನೇಂದೂ ಬರಲಾರವು ಎಂಬ ಯೋಚನೆ ನೋವು ಕೊಡುತ್ತದೆ.   ಕ್ಷಣಗಳು, ದಿನಗಳು, ವರ್ಷಗಳು ಅದೆಷ್ಟು ಬೇಗ ಜಾರಿ ಹೋಗುತ್ತಿವೆ. ವರ್ಷಗಳು ಕ್ಷಣಗಳಂತೆ ಹಾರಿ ಹೋಗುತ್ತಿವೆಯೇನೋ ಅನಿಸುತ್ತೆ ಒಮ್ಮೊಮ್ಮೆ. ಬಾಲ್ಯದ ದಿನಗಳ ನೆನಪು ಗ್ಲುಕೋಸ್ ಇದ್ದಂಗೆ. ಮನಸ್ಸಿನ ಬೇಜಾರನ್ನು ಕ್ಷಣದಲ್ಲಿ ಮಾಯಾವಾಗಿಸಿ ಮುಖದಲ್ಲಿ ನಗು ಮೂಡಿಸುತ್ತವೆ. ಆ ದಿನಗಳ ಕೆಲ ಮುದ ನೀಡುವ ವಿಷಯಗಳನ್ನ ಬರೆಯಬೇಕೆನಿಸಿದೆ.

ನಮ್ಮೂರಲ್ಲಿ ಹಾಡುಗಾರರ ಹಾವಳಿ ಸ್ವಲ್ಪ ಜಾಸ್ತಿ ಇತ್ತು. ನಮ್ಮನೆಯಲ್ಲಿ ಇನ್ನೂ ಸ್ವಲ್ಪ ಜಾಸ್ತಿ. ನಾನು ಹೈಸ್ಕೂಲ್ ಕಲಿಯುತ್ತಿದ್ದ ದಿನಗಳು. ಒಂದು ದಿನ ನಾನು ಸುಮ್ನೆ ಒಂದು ಹಾಡು ಗುನುಗುತ್ತಿದ್ದೆ (ಸ್ವಲ್ಪ ಜೋರು ಸ್ವರದಲ್ಲೇ.) 
  " ಆಕಾಶದಾಗೆ ಯಾರೋ ಮಾಯಗಾರನೋ, ಈ ಭೂಮೀ ಮಾಡಿ ಹೋಗವ್ನೆ ಏ ಏ ಏ ಏ ಏ......ಈ ಭೂಮೆ ಮ್ಯಾಗೆ ಯಾರೋ ತೋಟಗಾರನೋ, ಮಲೆನಾಡ ಮಾಡಿ ಹೋಗವ್ನೆ ಏ ಏ ಏ ಏ ಏ ... ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾ ಬಾರಾ ಆ ಆ ಆ ಆ.........      ಗೊತ್ತಾಗಿರ್ಬೇಕಲ್ಲ ಹೇಗೆ ಹಾಡಿದ್ದೆ ಅಂತ..... ಯೆಸ್,   ಹಾಗೆ   ಆ ಆ ಆ ಆ ಆಂತ ಆಲಾಪ.  ನಂಗೆ ಮುಂದೆ ಬರೋದಿಲ್ಲ ಆ  ಹಾಡು, ಅದ್ಕೆ ಅಲ್ಲಿಗೆ  ನಿಲ್ಲಿಸ್ಲೆ ಬೇಕಾಯ್ತು.  ನನ್ನ ತಂಗಿಗೆ ಹಾಡಿನ ಪಲ್ಲವಿಯೂ ಬರ್ತೀತ್ತು ಅನಸತ್ತೆ....ಸರಿ ಶುರು ಮಾಡೇ ಬಿಟ್ಲು.  ಒಂದು ಪಲ್ಲವಿ ಆಯ್ತು. ಮುಂದಿನ ಸಾಲುಗಳು ಅವ್ಳಿಗೆ ಬರೋಲ್ಲ ಈಗ ಮುಗಿಸ್ತಾಳೆ ಅಂತ ಸಮಾಧಾನ ಪಡ್ತೀರೊವಾಗ್ಲೆ ಶುರು ಮಾಡೇ ಬಿಟ್ಲು ಮುಂದಿನ ಪಲ್ಲವಿ ಕೂಡ. ಆ  ಹಾಡು ಅವ್ಳಿಗೆ ಪೂರ್ತಿ ಬರುತ್ತೆ ಅಂತ ಗೊತ್ತಾದ ಮೇಲೆ ನಾನು decide ಮಾಡಿದ್ದೆ ಆ ಹಾಡನ್ನು ಇನ್ಯಾವತ್ತೂ ಹೇಳಬಾರದು ಅಂತ. ಅವಳು ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪಕ್ಕದ ಮನೆಯ ಸುವರ್ಣತ್ತಿಗೆ ಕೂಡ ಅದೇ ಹಾಡು ಶುರು ಮಾಡಿದಾಗ ನಾನು ಸುಸ್ತು. (ನಾನು ಹಾಡುವಾಗ ಕೂಡ  ಅವರೆಲ್ಲಾ ಸಹಿಸಿಕೊಳ್ಳುತ್ತಿದ್ದರು..ಅದು ಬೇರೆ ವಿಷಯ.)
ಒಂದು ದಿನ ಎಂದೂ ಯಾರಿಗೂ ಬಯ್ಯದ ನಮ್ಮಪ್ಪ, ಮಲಗಿದ್ದವರು ಎದ್ದು ಬಂದು ಹಾಡುತ್ತಿರುವ ನನ್ನ ಇನ್ನೊಂದು ತಂಗಿಗೆ 'ನೀನೀಗ ಬಾಯಿ ಮುಚ್ಚದಿದ್ದರೆ ನಿನ್ನ ಬಾಯಿಗೆ ಗಂ ಅಂಟಿಸಿಬಿಡುತ್ತೇನೆ' ಅಂದಾಗ  ತಂಗಿಯ ಮುಖ ಹುಳ್ಳಗಾಗಿದ್ದರೂ ನಾವೆಲ್ಲಾ ಮುಸಿ ಮುಸಿ ನಕ್ಕಿದ್ದೆವು.
ಇನ್ನೊಮ್ಮೆ  ನನ್ನ ಇನ್ನೊಬ್ಬ ತಂಗಿ ತುಂಬಾ ಜೋರು ಸ್ವರದಲ್ಲಿ ಹಾಡುತ್ತಿದ್ದಳು. ತಮಾಷೆಯ ಸ್ವಭಾವದ ನನ್ನ ಚಿಕ್ಕಪ್ಪ " ನೀನು ಅಷ್ಟು ಏರು ಸ್ವರದಲ್ಲಿ ಹಾಡುತ್ತಾ ಹೋದ್ರೆ ಆಮೇಲೆ ಇಳಿಸೋಕೆ ಒದ್ದಾಡ್ತೀಯ ..ನನ್ನತ್ರ ಇಳಿಸಿಕೊಡು ಅಂತ ಕೇಳಿದ್ರೆ ನಾನಂತೂ ಇಳಿಸೋಕೆ ಸಹಾಯ ಮಾಡಲ್ಲಾ" ಅಂದಾಗ ನಮಗೆಲ್ಲ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. 
(ನನ್ನ ತಂಗಿಯರು  ಚೆನ್ನಾಗೇ ಹಾಡ್ತಾರೆ. ಆದ್ರೆ ಎಲ್ಲರೂ ಹಾಡುಗಾರರಾಗಿದ್ದಕ್ಕೆ ಸ್ವಲ್ಪ ಕಷ್ಟವಾಗಿದ್ದು..!!)
ಹೀಗೆ ಇನ್ನೆಷ್ಟೊ ಘಟನೆಗಳು. ಬರೆಯುತ್ತಾ ಹೋದರೆ ದೊಡ್ಡ ಪುಸ್ತಕವೇ ಆದೀತು. ನಮ್ಮ ಮನೆಯವರೆಲ್ಲ ಸೇರಿದಾಗ ಇದೆಲ್ಲಾ ನೆನಪಿಸಿಕೊಂಡು ತುಂಬಾ ನಗುತ್ತೇವೆ. ಆ ದಿನಗಳು ಇನ್ನೆಂದೂ ಬರಲಾರವು. ಮತ್ತೆ ಬೇಕೆಂದು ಕೇಳಿದರೆ ದುರಾಸೆಯಾದೀತು. ಆ ನೆನೆಪುಗಳೇ ಸಾಕು ಮನಸ್ಸನ್ನು ಮುದಗೊಳಿಸಲು.

ಬಾಲ್ಯದ ನೆನಪು ಮುಖದಲ್ಲಿ ಮುಗುಳ್ನಗೆ ತಂದಿದೆ. ನಾವೆಲ್ಲ ಅಕ್ಕ ತಂಗಿಯರು ಒಬ್ಬರಿಂದೊಬ್ಬರು ದೂರದಲ್ಲಿದ್ದರೂ  ಮನಸ್ಸಿನಲ್ಲಿ ತುಂಬಾ ಹತ್ತಿರದಲ್ಲಿದ್ದೆವಲ್ಲಾ ..ಅಷ್ಟು ಸಾಕು.
ಹೊಸಜೀವನದ ಹೊಸಿಲಲ್ಲಿ ನಿಂತಿರುವ  ನನ್ನ ತಂಗಿ ರಚನಾ ಗೆ  ಮದುವೆಯ ಅನುಬಂಧ ಎಂದೂ ಮಧುರ ಅನುಭೂತಿಯನ್ನು ನೀಡುತ್ತಾ ಅವಳ ವೈವಾಹಿಕ ಜೀವನ ಸದಾ ಹರುಷದಿ ಹಸಿರಾಗಿರಲಿ ಎಂದು ಮನತುಂಬಿ ಹಾರೈಸುತ್ತೇನೆ.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊಸ ಜೋಡಿಗೆ
ಜೀವನದ ತುಂಬೆಲ್ಲ ಹರುಷ ತುಂಬಿರಲಿ.....
ಸರಸ ಸಲ್ಲಾಪದ ಮಳೆ ಸುರಿಯಲಿ
ಪ್ರೇಮಾನುರಾಗಗಳು ಮನದಲ್ಲಿ ಮನೆ ಮಾಡಲಿ
ಮದುವೆಯ ಈ ಬಂಧ ಸದಾ ಸಂತೋಷದಿ ಹಸಿರಾಗಿರಲಿ.

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com