ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಹೀಗೊಂದು ಪ್ರೀತಿಯ ಆತಿಥ್ಯ .....!! ನೆನಪುಗಳ ಬುತ್ತಿಯಿಂದ ...

ನನಗೆ ಆಗಷ್ಟೇ ಮೊದಲ ವರ್ಷದ ಡಿಗ್ರೀ ಯ ಕ್ಲಾಸ್ ಗಳು ಮುಗಿದು ರಜ ಶುರುವಾಗಿತ್ತು. ಚೆನ್ನೈ ನಲ್ಲಿರುವ ನಮ್ಮತ್ತೆಯಿಂದ ಫೋನ್ ಮೇಲೆ ಫೋನ್, ಈ ಸಲದ ರಜವನ್ನು ಚೆನ್ನೈ ನಲ್ಲಿ ಕಳೆಯಬಹುದು  ಬಾ ಎಂದು ಒಂದೇ ಸಮನೆ ಒತ್ತಾಯ. ಸರಿ ಎಂದು ನಾನು ಎರಡು ದೊಡ್ಡ ಬ್ಯಾಗ್ ಗಳ ಜೊತೆ ಚೆನ್ನೈ ತಲುಪಿಯಾಯ್ತು.  ಸೊಸೆಯಂದಿರು ಅಂದರೆ ನಮ್ಮತ್ತೆಗೆ ಪ್ರಾಣ.  ನಾನು ಹೋದ ಎರಡೇ ದಿನದಲ್ಲಿ ತಮ್ಮ ಸ್ನೇಹಿತ ಬಳಗಕ್ಕೆಲ್ಲ ' ತನ್ನ ಅಣ್ಣನ ಮಗಳು' ಎಂದು ಪರಿಚಯ ಮಾಡಿಕೊಟ್ಟಿದ್ದಾಯ್ತು. ನನಗೋ ಮಾತಿಗೆ ಮೊದಲು ನಗು , ಮಾತಿನ ನಂತರ ನಗು    ...ಸ್ವಲ್ಪ ನಗು ಜಾಸ್ತಿ. ಎಂದಿಗೂ ಹೀಗೆ ನಗುತ್ತಿರಮ್ಮ ಎಂಬ ಹಾರೈಕೆಯೂ ಹಿರಿಯರಿಂದ ಸಿಕ್ಕಿತು.ಚೆನ್ನೈ ನಲ್ಲಿರುವ ಕನ್ನಡ ಬಳಗ ಸಂಘದಲ್ಲಿ ನಮ್ಮತ್ತೆ ಹಾಗೂ ಮಾವ ಸಕ್ರಿಯ ಸದಸ್ಯರು, ನಾನು ಹೋದ ಸಮಯದಲ್ಲಿ ಮಾವ ಬಳಗದ ಸೆಕ್ರೆಟರಿ ಕೂಡ ಆಗಿದ್ದರು. ಹಾಗಾಗಿ, ಕನ್ನಡ ಬಳಗದ ಎಲ್ಲಾ ಚಟುವಟಿಕೆಗಳಲ್ಲಿ ಅತ್ತೆ ಮಾವರ ಜೊತೆ ನನಗೂ ಭಾಗವಹಿಸುವ ಅವಕಾಶ ಸಿಕ್ತು. ನಮ್ಮತ್ತೆಯ  ಸ್ನೇಹಿತರ  ಜೊತೆಗೆ ಕಳೆದ ಕೆಲ ಕ್ಷಣಗಳು, ಅವರ ಜೊತೆಗಿನ  ಒಡನಾಟ  ಕೆಲವೇ ದಿನಗಳದ್ದಾದರೂ  ಜೀವನಪೂರ್ತಿ ಮರೆಯಲಾರದಂಥ ಕೆಲವು ಅಪೂರ್ವ ಅನುಭವಗಳನ್ನಿತ್ತಿದೆ. ಅವರೆಲ್ಲರು ನನ್ನಲ್ಲಿ ತೋರಿದ ಆ ಪ್ರೀತಿ ಜೀವನಾನುಭವದ ಪುಟಗಳಲ್ಲಿ ಮಧುರತೆಯನ್ನು ತುಂಬಿದೆ.
ನನ್ನತ್ತೆ ಮನೆಯಿಂದ ಹತ್ತಿರವೇ ಇದ್ದ ಇನ್ನೊಬ್ಬ ಕನ್ನಡಿಗರು ಮೈಸೂರಿನ ನಿವೃತ್ತ ದಂಪತಿಗಳು. ನಮ್ಮತ್ತೆ ಅವರನ್ನು  ಅಂಕಲ್ ಆಂಟಿ  ಎಂದು ಕರೆಯುತ್ತಿದುದರಿಂದ ನನಗೂ ಅವರು ಅಂಕಲ್ ಆಂಟಿ ಆದರು.. ಅತ್ತೆ ಮನೆ ಹತ್ತಿರವೇ ಅವರ ಮನೆ ಇದ್ದುದರಿಂದ ದಿನಕ್ಕೊಮ್ಮೆ ಅವರ ಮನೆಗೆ ಹೋಗಿ ಬರುವುದು ಅಭ್ಯಾಸವಾಯ್ತು.ಅವರು ನಮಗೆ ತೋರುತ್ತಿದ್ದ ಪ್ರೀತಿ, ಆಪ್ಯಾಯಮಾನತೆಯನ್ನು ಇಲ್ಲಿ ಶಬ್ಧಗಳಿಂದ ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಅವರು ನಮ್ಮನ್ನು ಒಂದಿನ ಊಟಕ್ಕೆ ಕರೆದಾಗ ನಾವು ಸಂತೋಷದಿಂದ ಒಪ್ಪಿಕೊಂಡು ಅವ್ರ ಮನೆಗೆ ಊಟಕ್ಕೆ ಹೋದೆವು.
ಸ್ಟಾರ್ಟರ್ ಗೆ ಟೊಮ್ಯಾಟೊ ಸೂಪ್ ಮಾಡಿದ್ರು. ತುಂಬಾ ರುಚಿಯಾಗಿತ್ತು. " ತುಂಬಾ ರುಚಿಯಾಗಿದೆ ಆಂಟೀ ..ನಂಗೆ ಇದರ recipe ಕೊಡಿ ನಾನೂ ಮನೆಗೆ ಹೋಗಿ ಟ್ರೈ ಮಾಡ್ತೀನಿ" ಅಂದೆ. ಆವ್ರು ಖುಷಿಯಾಗಿ ಮುದ್ದಾಮ್ ಹೇಳ್ಕೊಡ್ತೀನಮ್ಮ ಅಂತ ಹೇಳ್ತಾ ನಂಗೆ ಇನ್ನೊಂದಿಷ್ಟು ಸೂಪ್ ಬಡಿಸಿಬಿಟ್ರು. ಓಹ್ ! ಸರಿ ....ಚೆನ್ನಾಗಿತ್ತಲ್ಲಾ ...ಮುಗಿಸಿದೆ.
ಸೂಪ್ ನ ನಂತರ ಮೊಸರೊಡೆ ಬೌಲ್ ತಂದು ಮುಂದಿಟ್ಟರು. " ಇದೇನು ಆಂಟಿ ನಾನು ಇದುವರೆಗೂ ತಿಂದಿಲ್ಲ" ಅಂದೆ. "ಇದು ಮೊಸರೊಡೆ ...ಚೆನ್ನಾಗಿರುತ್ತೆ ತಿನ್ನಮ್ಮ" ಅಂದ್ರು.  ರುಚಿ ನೋಡಿ ಪರವಾಗಿಲ್ಲ ಚೆನ್ನಾಗಿದೆ ಎಂದು ಮೊಸರೊಡೆ ಮುಗಿಸಿದ್ದಾಯ್ತು.ಆಮೇಲೆ ಪೂರಿ ಸಾಗು... "ಅಯ್ಯೋ! ನಂಗೆ ಹೊಟ್ಟೆ ತುಂಬೊಯ್ತು ಆಂಟಿ ..ಒಂದೇ ಪೂರಿ ಸಾಕು" ಅಂದ್ರೂ ಕೆಳದೇ ಎರಡು ಪೂರಿ ಬಡಿಸಿದ್ರು. ಅದನ್ನೂ ತಿಂದಿದ್ದಾಯ್ತು.
ಅದು ತಿಂದಾದ ಮೇಲೆ ಪುಲಾವ್ ತಂದಾಗ ನಂಗೆ ಆಗ್ಲೇ ಹೊಟ್ಟೆ ತುಂಬಿದೆ. ಪುಲಾವ್ ಬೇಡ ಅಂದೆ. "ಅದಹೇಗಾಗತ್ತಮ್ಮ, ಅನ್ನಾನೇ ತಿನ್ನದೇ ಊಟ ಹೇಗೆ ಮುಗಿಸ್ತೀಯಾ ..ಸ್ವಲ್ಪ ತಿನ್ನು" ಅನ್ನುತ್ತಾ ಬಡಿಸಿದಾಗ ಬೇರೆ ವಿಧಿ ಇಲ್ದೇ ತಿಂದೆ.
ಅದಾದ ಮೇಲೆ ಜಾಮೂನ್ ಬೌಲ್  ತಂದು ಟೇಬಲ್ ಮೇಲಿಟ್ಟಾಗ  ನಾನು ಸುಸ್ತು ...!!
" ನಂಗೆ ಎದ್ದು ಓಡಿ ಹೋಗೋಣ ಅನಸ್ತಾ ಇದೆ ಆಂಟಿ " ಅಂದೆ ನಗುತ್ತಾ ..
"ನಿಂಗೆ ಎಷ್ಟು ಸೇರುತ್ತೋ ಅಷ್ಟೇ ತಿನ್ನಮ್ಮ ..ಆದ್ರೆ ಸ್ವಲ್ಪನೂ ತಿನ್ನದೇ ಮಾತ್ರ ಏಳಬೇಡ " ಅಂದ್ರು. 
ಅಯ್ಯೋ ..ಇನ್ನು ನನ್ನತ್ರ ಸಾಧ್ಯಾನೆ ಇಲ್ಲಾ ಆಂಟಿ " ಅಂದೆ.
ಹಾಗೆ ಹೇಳಬಾರದಮ್ಮ ...ನಿಂಗೋಸ್ಕರನೇ ಮಾಡಿದ್ದು ..ಸ್ವಲ್ಪ ತಿನ್ನು ಎನ್ನುತ್ತಾ ಬಡಿಸಿದಾಗ ನಂಗೆ ಅಳು ಬರುವುದೊಂದು ಬಾಕಿ.
ಆದ್ರೂ ಅವರು ಪ್ರೀತಿಯಿಂದ ನಮಗೋಸ್ಕರವೇ ಶ್ರಮ ಪಟ್ಟು ಮಾಡಿದ್ದಾರಲ್ಲ. ಅವ್ರ ಮನಸ್ಸು ನೋಯಿಸಲಾಗದು ನನ್ನಿಂದ...ಹೇಗೋ ಸ್ವಲ್ಪ ತಿಂದೆ.
ಅಲ್ಲಿಯವರೆಗೂ ನಗುತ್ತಾ ಮಾತಾಡ್ತಾ ಕೂತಿದ್ದ ಅಂಕಲ್ ಎದ್ದು ಬಂದು ಮಾರ್ಕೆಟ್ ನಿಂದ ತಂದ ಜಿಲೇಬಿ ಎದುರಿಟ್ಟಾಗ ...ನಾನು ನಿಜಕ್ಕೂ ಗಾಬರಿ ಬಿದ್ದೆ..!!  ಅಂಕಲ್ ..ನಾನು ಇನ್ನೂ ಏನಾದ್ರೂ ತಿಂದ್ರೆ ನಂಗೆ ನಡೆದು ಹೋಗೋಕ್ಕಾಗಲ್ಲ...ಯಾರಾದ್ರೂ ಹೊತ್ತು ಹೋಗಬೇಕಷ್ಟೆ..ಅಂದರೂ ಕಿವಿಗೆ ಹಾಕಿಕೊಳ್ಳದೆ ಒಂದು ಪೀಸ್ ಕೈಯಲ್ಲೇ ತಗೊ..ಟೇಸ್ಟ್ ಕೂಡ ನೋಡದೆ ಹಾಗೆ ಬಿಡಬೇಡ ಅಂದಾಗ ನನಗೆ ಕಣ್ಣಲ್ಲಿ ನೀರು ಬಂದಿತ್ತು ಅನಸತ್ತೆ.  
ಆ ಪ್ರೀತಿಯನ್ನು ಹೇಗೆ ನಿರಾಕರಿಸೋದು ? ಒಂದೇ ಒಂದು ಸ್ಮಾಲ್ ಪೀಸ್ ತಗೊಂಡು ತಿಂದು ಕೈ ತೊಳೆಯಲು ಸಿಂಕ್ ಗೆ ಹೋದಾಗ ............................. ತಿಂದಿದ್ದೆಲ್ಲಾ ಉಲ್ಟಾ ..... :P
ನಮ್ಮತ್ತೆ ನೋಡಿ ನಗ್ತಾ ನಿಂತಿದ್ರು.. ಅಂಕಲ್ , ಆಂಟಿ ನೂ ನೋಡಿಬಿಟ್ರೆ ಅಂತ ನಂಗೆ  ಭಯ . ಬೇಗ ಬೇಗ ಸಿಂಕ್ ಎಲ್ಲಾ ಕ್ಲೀನ್ ಆಗುವಂತೆ ನೀರು ಬಿಟ್ಟೆ. ( ನನಗೆ ಮೊಸರೊಡೆ ತಿಂದ್ರೆ ಆಗೋಲ್ಲ ..ಮತ್ತೊಮ್ಮೆ ಅದನ್ನು ತಿಂದು ಉಲ್ಟಾ  ಆದ್ಮೇಲೆ ಗೊತ್ತಾದದ್ದು !! )
ಅಂತೂ ಊಟ ತುಂಬಾ ಚೆನ್ನಾಗಿತ್ತು ಅಂತ ಹೊಗಳಿ recipe ಗಳನ್ನೆಲ್ಲ ಬರೆದುಕೊಂಡು ಮನೆಗೆ ಬಂದೆವು.
ಅಂಕಲ್ , ಆಂಟಿ ಯ ಪ್ರೀತಿ ಯಾವುದೋ ಜನ್ಮಾಂತರಗಳ ಋಣವಿರಬಹುದು ಅನ್ನಿಸಿತ್ತು. ಆಮೇಲೆ ನನ್ನ ಮದುವೆಯಾಗಿ ನಾವು ಮೈಸೂರ್ ನಲ್ಲಿ ಕಲ ದಿನಗಳಿದ್ದು ನಂತರ ಡೆಲ್ಲಿ ಗೆ ಟ್ರಾನ್ಸಫರ್ ಆಗಿ ಹೋಗುವಾಗ ನಮ್ಮನ್ನು ಬೀಳ್ಕೊಡಲೆಂದು 70 ರ ಹರೆಯದ ಅವರು ರೈಲ್ವೇಸ್ಟೇಷನ್ ಗೆ ಬಂದಾಗ ಅವರ ಕಾಲಿಗೆ ನಮಸ್ಕರಿಸಿ ಅತ್ತುಬಿಟ್ಟಿದ್ದೆ. (ಅವರು ಮುಂಚಿನ ದಿನವಷ್ಟೇ ರಜಕ್ಕೆಂದು ಮೈಸೂರ್ ಗೆ ಬಂದಿದ್ದರು. )
ಇಂಥ ಅನುಭವಗಳು ಜೀವನ ದ ಹಾಗೂ ಸಮಾಜದ ಬಗೆಗಿನ ನಮ್ಮ ನಿಲುವನ್ನೆ ಬದಲಾಯಿಸಿಬಿಡುತ್ತವೆ. ಜಗತ್ತು ಎಷ್ಟು ಸುಂದರ ಎಂಬ positive feeling ನ್ನು ನಮ್ಮಲ್ಲಿ ತುಂಬುತ್ತವೆ. ಎಲ್ಲರಿಗೂ  ನಿಸ್ವಾರ್ಥ ಪ್ರೀತಿ ಹಂಚುವ ಅಂಕಲ್ ಆಂಟಿ ಯ ರೀತಿಯ ಜನ ಈ ಕಾಲದಲ್ಲೂ ಇದ್ದಾರಲ್ಲ ಎನ್ನುವ ಯೋಚನೆ  ಹಿತವೆನಿಸುತ್ತದೆ.
ಅತ್ತೆ ಮನೆಯ ಪಕ್ಕದವರಾದ ಸರೋಜ ಆಂಟಿ, ಸುಗುಣ ಆಂಟಿ, ಅತ್ತೆಯಲ್ಲಿ ಯೋಗ ಕಲಿಯಲು ಬರುತ್ತಿದ್ದ ರತ್ನ, ಅವರೆಲ್ಲಾ ಕನ್ನಡದವರಲ್ಲದಿದ್ದರೂ ನಾವು ಗಂಟೆಗಟ್ಟಳೆ ಮಾತಾಡುತ್ತಿದ್ದುದು, ಅವರು ತಮಿಳ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಕನ್ನಡದಲ್ಲಿ ಉತ್ತರಿಸುತ್ತಿದ್ದುದು, ಅವೆಲ್ಲಾ ಮರೆಯಲಾರದ ಕ್ಷಣಗಳು ಹಾಗೂ ಮರೆಯಬಾರದ ಬಂಧಗಳು. 
ಚೆನ್ನೈ ನಲ್ಲಿ ನನ್ನ ಆತ್ಮೀಯ ಬಳಗವನ್ನು ಮತ್ತೊಮ್ಮೆ ಭೇಟಿಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅವರನ್ನೆಲ್ಲ ಭೇಟಿಯಾಗಿ ಹತ್ತು ವರ್ಷಗಳು ಕಳೆದಿದ್ದರೂ ಇಂದಿಗೂ ನನ್ನ ಕ್ಷೇಮ ವಿಚಾರಿಸುವ ಅವರ ಆತ್ಮೀಯತೆಗೆ ಕರಗಿಹೋಗಿದ್ದೇನೆ. ಚೆನ್ನೈ ಗೆ ಹೋಗಿ ಬಂದು 5 ವರ್ಷಗಳ ನಂತರ ನಡೆದ ನನ್ನ ಮದುವೆಗೆ ಅವರೆಲ್ಲಾ ಕಳುಹಿಸಿದ ರಾಶಿ ಉಡುಗೊರೆಗಳು ಅವರೆಲ್ಲರ ನೆನಪುಗಳನ್ನು ಹೊತ್ತಿರುವ ನನ್ನ ಪಾಲಿನ  ಅಮೂಲ್ಯ ಆಸ್ತಿಗಳು.
ನನ್ನ ಸ್ವಂತ ಅತ್ತೆಯನ್ನು ಭೇಟಿ ಮಾಡಿಯೇ 4 ವರ್ಷಗಳಾಯಿತು. ನಮ್ಮನ್ನೆಲ್ಲಾ ತುಂಬಾ ಪ್ರೀತಿಸುವ, ತುಂಬಾ ಹಚ್ಚಿಕೊಂಡಿರುವ ನಮ್ಮತ್ತೆ ಫೋನ್  ಮಾಡಿದಾಗಲೆಲ್ಲ ಎಮೋಷನಲ್ ಆಗಿಬಿಡುತ್ತಾರೆ.
ಜೀವನಚಕ್ರ ಉರುಳುತ್ತಿದ್ದಂತೆ , ದಾರಿಗಳು ಕವಲಾಗುತ್ತಿದ್ದಂತೆ ಭೌತಿಕವಾಗಿ ನಾವು ನಮ್ಮವರಿಂದ ಎಷ್ಟು ದೂರ ಸಾಗಬೇಕಾಗುತ್ತದಲ್ಲ. ಆದರೂ ಮನದಲ್ಲಿರುವ ಪ್ರೀತಿ ನಿಜವಾದದ್ದಾದಲ್ಲಿ ಒಬ್ಬರಿಗೊಬ್ಬರು,ಒಬ್ಬರೊಲ್ಲೊಬ್ಬರು ಸದಾ ಇದ್ದೇ ಇರುತ್ತೇವೆ.
ಈ ಸಲವಾದರೂ ಕನಿಷ್ಠ 15 ದಿನಗಳ ಮಟ್ಟಿಗೆ ಚೆನ್ನೈ ಪ್ರವಾಸದ ಮಹದಾಸೆ ಇದೆ. ಆ ಆಸೆ ಈಡೇರಲಿ ಎಂದು ಪ್ರಾರ್ಥಿಸುತ್ತಿದ್ದೇನೆ.

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com