ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ತಬ್ಬಲಿಯು ನೀನಾದೆ ಮಗುವೇ ..!!!

"ತಬ್ಬಲಿಯು ನೀನಾದೆ ಮಗನೆ,
ಹೆಬ್ಬುಲಿಯ ಬಾಯನ್ನು ಸೇರುವೆ,
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ.."
ನಾನು ಚಿಕ್ಕವಳಿರುವಾಗ ನನ್ನಮ್ಮ ಪ್ರತಿದಿನ  ರಾತ್ರಿ  ಪುಣ್ಯಕೋಟಿಯ ಕಥೆ ಹೇಳುತ್ತಿದ್ದರು. ದಿನವೂ ಆ ಗೋಮಾತೆಯ ದು:ಖ ಕ್ಕೆ ನಾನೂ ಅಳುತ್ತಿದ್ದೆ. ಆ ಕರುವಿಗೆ ಇನ್ನು ಅಮ್ಮನಿರುವಿದಿಲ್ಲವಲ್ಲ ಎಂದು ದು:ಖಿಸುತ್ತಿದ್ದೆ...
ಅದು ಇಪ್ಪತ್ತು ವರ್ಷಗಳ ಹಿಂದೆ ...
ಇಂದೂ ಅಳುತ್ತಿದ್ದೇನೆ...ಅದೇ ವೇದನೆಯನ್ನು, ಅದರಾಳವನ್ನು ಅನುಭವಿಸಿ ಅಳುತ್ತಿದ್ದೇನೆ.. ಅಂದು ಅದು ಕಥೆಯೆಂದು ತಿಳಿಯದೆ ಅಳುತ್ತಿದ್ದೆ...ಇಂದು ಇದು ಕಥೆಯಲ್ಲವೆಂಬುದು ಅರಿವಾಗಿ ಅಳುತ್ತಿದ್ದೇನೆ..
ಆ ಗೋವಿಗಾದ ನೋವು ಹೇಗಿತ್ತೆಂದು  ನನಗೂ  ಅರ್ಥ ಮಾಡಿಸುವ ಆಸೆ  ವಿಧಿಗ್ಯಾಕೆ ಬಂತು ..?
ನನಗಿನ್ನು ನಾಳೆಗಳಿಲ್ಲ..ನನ್ನ ಮಗುವಿಗಿನ್ನು ಅಮ್ಮನಿರುವುದಿಲ್ಲ ..ನನ್ನ ಕರುಳ ಕುಡಿ ಅಮ್ಮನಿಲ್ಲದ ತಬ್ಬಲಿ...ಅದೆಷ್ಟು ಯಾತನೆ  ಕೊಡುವಂಥ ಯೋಚನೆ ಅದು. ..ಆದರದೇ ನಿಜವಾಗುತ್ತಿದೆಯಲ್ಲ...
ಮೇಲಿರುವ   ಸೂತ್ರದಾರಿಗೆ ಯಾಕಿಷ್ಟು ಬೇಗ ನನ್ನೀ ಪಾತ್ರದ ಮೇಲೆ ಬೇಸರ ಬಂತು...? ನನ್ನೀ ಹಸುಗೂಸನ್ನು ಬಿಟ್ಟು ನಾ ಹೇಗೆ ತೊರೆಯಲಿ ಈ  ಜಗವನ್ನು...ಇನ್ನೂ ಜಗತ್ತನ್ನರಿಯದ ಹಸುಳೆ ನನ ಕಂದ..ಅಮ್ಮನ ಬಿಟ್ಟು ಒಂದು ದಿನವೂ ಇರಲಾರ ನನ ಕಂದ ..ಇನ್ನು ಶಾಶ್ವತವಾಗಿ ಅಮ್ಮನಿಲ್ಲದ ಮಗುವಾಗುವುದೆಂಬ ಸತ್ಯವನ್ನು ಹೇಗೆ ನಂಬಲಿ ನಾನೀಗ ?  ....ಯಾರೆಷ್ಟೇ ಮುದ್ದಿಸಿದರೂ ಅಮ್ಮನ ಮಮತೆಯನ್ನು ನನ ಕಂದನಿಗೆ  ಯಾರು ಕೊಡಬಲ್ಲರು...ನಿಜ ...ನನ್ನ ಪತಿ  ನನ್ನ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದು ..ಆದರೆ ಅವರ ಮುಂಗೋಪ ನನ ಕಂದನಿಗೆ ಹಿಂಸೆಯಾಗಬಹುದಲ್ಲ.
ಬೇರೆ ಯಾರಿಗಾದ್ರೂ  ಕಷ್ಟ ಬಂದಾಗ ಅಯ್ಯೋ ಪಾಪ ಅಂದುಕೊಳ್ಳುತ್ತಿದ್ದೆನಲ್ಲ...ಆದರೆ ಅವರಿಗಾಗುವ ನೋವಿನ ಆಗಾಧತೆಯ ಅರಿವಿರಲೇ ಇಲ್ಲ ಆಗ.. ಈಗ ಅರಿವಾಗುತ್ತಿದೆ ಕಷ್ಟದೊಳಗಿನ ಯಾತನೆಯ ಆಳ.... ಆ ನೋವಿನ ಆಳವನ್ನು ಈಗ ಅಳೆಯುತ್ತಿದ್ದೇನೆ...ಅದೇ  ಆಳದಲ್ಲಿ ಇಳಿಯುತ್ತಿದ್ದೇನೆ...ಇಳಿದು ಇಳಿದು ಅಸ್ತವಾಗುತ್ತಿದ್ದೇನೆ..
ನಾನು ಅಸ್ತಿಯಾದರೆ ಯಾರಿಗೇನೂ ತುಂಬಾ ನಷ್ಟವೇನಿಲ್ಲ.. ತುಂಬಲಾರದ ಅಸ್ತಿಥ್ವವೇನಲ್ಲ ನನ್ನದು..
ಆದರೆ ನನ್ನಮ್ಮನಿಗೆ , ನನ್ನ ಕಂದಮ್ಮನಿಗೆ ಮಾತ್ರ ತುಂಬಲಾರದ ನಷ್ಟವೇ ಅಲ್ಲವೇ ....
ದೇವರೇ ....ನಾನೇನು ಮಾಡಲಿ ಈಗ.. ? ಇನ್ನೈದು ವರ್ಷ ನನ್ನ ಆಯಸ್ಸನ್ನು ಹೆಚ್ಚಿಸಲಾರೆಯಾ ..ನನಗೊಸ್ಕರವಲ್ಲ ...ಅಣು ಅಣುವನ್ನೂ ತಿನ್ನುತ್ತಿರುವ ಈ ಕ್ಯಾನ್ಸರನೊಡನೆ  ಬಾಳಿ  ನಾನೇನೂ ಸಾಧಿಸಲಾಗುವುದಿಲ್ಲ ನಿಜ  !! ಆದರೆ ನನ್ನ ಹಸುಕೂಸಿಗೆ ಅಮ್ಮ ಬೇಕಲ್ಲ ..  ಬಾಲ್ಯ ಕಳೆಯುವ ತನಕ ಅಮ್ಮನ ವಾತ್ಸಲ್ಯ ಬೇಕಲ್ಲ ….
ನಾನು ಸಾಯುತ್ತಿರುವುದಕ್ಕಲ್ಲ ನನಗೀ ಸಂಕಟ. ನನ್ನ ಮಗುವನ್ನು ತಬ್ಬಲಿಯನ್ನಾಗಿ ಮಾಡುತ್ತಿರುವುದಕ್ಕೆ...ನಾನಿಲ್ಲದೆ ನನ್ನ ಮಗಳು ಪಡಬಹುದಾದ ಸಂಕಷ್ಟಗಳ ಬಗ್ಗೆ...ನನ್ನ ನೋವು.
ಎಲ್ಲ ರೋಗಗಳಿಗೂ ಮದ್ದು ಹುಡುಕಿರುವ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆಯಾಕೆ ಸೋಲೋಪ್ಪಿಕೊಳ್ಳುತ್ತಿದ್ದಾರೆ?
ಅಥವಾ ಇದೆಲ್ಲ ಆ ದೇವರ ನಾಟಕದ ತಿರುವುಗಳೇ? ...ಅಥವಾ ಆ ವಿಧಿಯ ಆಟವೇ?
ಹ್ಮ: ...ನನ್ನ ಹಣೆಬರಹಕ್ಕೆ ಯಾರನ್ಯಾಕೆ ದೂಷಿಸಲಿ ನಾನು....ಯಾವುದೋ ಜನ್ಮದಲ್ಲಿ ಅಮ್ಮ ಮಗುವನ್ನು ಅಗಲಿಸುವ ಪಾಪವೆಸಗಿದ್ದೇನೋ  ಏನೋ ...ಅದರ ಫಲವಿರಬಹುದು...
ವಿಧಿಯಾಟವನ್ನು ವಿರೋಧಿಸಲು  ನಾನ್ಯಾರು? ..ಇಲ್ಲ ..ಹಾಗಲ್ಲ..ವಿಧಿಯನ್ನು ವಿರೋಧಿಸಲು ಸಾಧ್ಯವೇ ಇಲ್ಲ ...ಹಾಗೊಮ್ಮೆ ವಿರೋಧಿಸಲು ಸಾಧ್ಯವಿದ್ದಲ್ಲಿ ಜಗತ್ತು ಹೀಗಿರುತ್ತಿರಲಿಲ್ಲವಲ್ಲ ........
ಈಗ ನಾನು ಮಾಡಲು ಸಾಧ್ಯವಿರುವುದೊಂದೇ..ಆ ಪುಣ್ಯಕೋಟಿ ಯಂತೆ ಬೇಡಿಕೊಳ್ಳುವುದು ......
"ಅಮ್ಮಗಳಿರಾ ಅಕ್ಕಗಳಿರಾ..
ಎನ್ನ ತಾಯ್ ಒಡ ಹುಟ್ಟುಗಳಿರಾ..
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯ ನೀ ಮಗುವನು..


ಕೋಪ ಬಂದರೆ  ಹೊಡೆಯಬೇಡಿ ,
ಸಹನೆ ಕಳೆದು ಬಯ್ಯಬೇಡಿ ,
ಅಮ್ಮನಿಲ್ಲದ ಕಂದ ನನ ಮಗು,
ತಬ್ಬಲಿಯ ನೀ ಶಿಶುವನೂ  ..........."


ಓದಿ ಮುಗಿಸಿದ ವಾಣಿಯ ಕಣ್ಣುಗಳು ಕೊಳವಾಗಿ ಹರಿಯುತ್ತಿತ್ತು. ಮನಸಲ್ಲಿ ಭರಿಸಲಾರದಂಥ  ಯಾತನೆ. ಕಂಠ ಕಟ್ಟಿಕೊಂಡು ಅಳು ಉಕ್ಕಿಬರುತ್ತಿತ್ತು. ಅದ್ಹೇಗೋ ಸಾವರಿಸಿಕೊಂಡು, ಆ ಡೈರಿಯನ್ನು ಅಲ್ಲೇ ಮುಚ್ಚಿಟ್ಟು ಒಂದರೆಗಳಿಗೆ ಅಲ್ಲೇ ಕುಳಿತಳು. ಸುಮನಾಳ ಆ ಬರಹ ಅವಳ ಯಾತನೆಗೆ ಕನ್ನಡಿ ಹಿಡಿದಂತಿತ್ತು.  ಅತ್ತು ಅತ್ತು ಸುಸ್ತಾಗಿ ಮಲಗಿದ ಅಮೂಲ್ಯಳನ್ನೊಮ್ಮೆ ಕರುಣಾಪೂರಿತವಾಗಿ ನೋಡಿ  ರೂಮಿನಿಂದ ಹೊರಬಂದವಳೇ, ಶಾರದಮ್ಮನಿಗೆ ಮನೆಗೆ ಹೋಗುತ್ತಿರುವುದಾಗಿ ತಿಳಿಸಿ ಮನೆಕಡೆ ಹೆಜ್ಜೆ ಹಾಕಿದಳು.  ದಾರಿಯಲ್ಲಿ ಸಾಗುತ್ತಿರುವ ವಾಣಿಯ ಮನಸ್ಸು 2 ವರ್ಷ ಹಿಂದಕ್ಕೋಡಿತ್ತು.


                                               *                      *                        *
                                                              part 2
ಶಾರದಮ್ಮನ ಅಣ್ಣನ ಮಗಳು ವಾಣಿ.  ಶಾರದಮ್ಮನ ಮನೆಯಿಂದ ನಾಲ್ಕನೇ ಮನೆಯೇ ವಾಣಿಯ ಮನೆ. ಶಾರದಮ್ಮನ ಸೊಸೆ ಸುಮನಾ.   ವಾಣಿ ಮತ್ತು ಸುಮನಾ ಇಬ್ಬರಲ್ಲೂ ಸಂಬಂಧಕ್ಕಿಂತ ಹೆಚ್ಚಾಗಿ ಸ್ನೇಹ ಮೂಡಿತ್ತು. ಇಬ್ಬರದೂ ಒಂದೇ ರೀತಿಯ ಸ್ವಭಾವವಾದ್ದರಿಂದ ಆಪ್ತ ಗೆಳತಿಯರಾಗಿಬಿಟ್ಟಿದ್ದರು. ಇಬ್ಬರಿಗೂ ಒಂದೇ ವಯಸ್ಸಿನ ಮಕ್ಕಳು. ವಾಣಿಯ ಮಗ ಸುಹಾಸ್ ಹಾಗೂ ಸುಮನಾಳ  ಮಗಳು ಅಮೂಲ್ಯ ಇಬ್ಬರಿಗೂ ಆಗಿನ್ನೂ 1  ವರ್ಷ.
ಒಂದಿನ ಮಾರ್ಕೆಟ್ ಗೆ ಹೋಗುವಾಗ ಸುಮನಾ ತುಂಬಾ ಬೇಜಾರಿನಿಂದಿರುವಂತೆ ಅನಿಸಿತು ವಾಣಿಗೆ. ಅದನ್ನೇ ಕೇಳಿದಳು. ಆದರೆ ತನ್ನ ಬೇಜಾರನ್ನು ಬೇರೆಯವರಲ್ಲಿ ಹೆಚ್ಚಾಗಿ ಹಂಚಿಕೊಳ್ಳದ ಸುಮನಾ   ' ಏನಿಲ್ಲ ಬಿಡು ವಾಣಿ, ಸ್ವಲ್ಪ ತಲೆನೋಯುತ್ತಾ ಇದೆ ಅಷ್ಟೆ ' ಎಂದು ಹಾರಿಕೆಯ ಉತ್ತರ ಕೊಟ್ಟಳು  .
ಆದರೆ ವಾಣಿ ಬಿಡಲ್ಲಿಲ್ಲ..'ಯಾಕೆ ನನ್ನಲ್ಲೂ ಹೇಳುತ್ತಿಲ್ಲ ಸುಮನಾ ನೀನು. ನಂಗೊತ್ತಿದೆ ಏನೋ ವಿಷಯ ಇದೆ. ಆದರೆ ನೀನು ನನ್ನಿಂದ ಮುಚ್ಚಿಡ್ತಾ ಇದೀಯಾ.'
'ಏನಿಲ್ಲ ಬಿಡು ವಾಣಿ '
ನನಗೆ ಗೊತ್ತು ಸುಮನಾ ...ಮೊನ್ನೆ ನಾನು ನಿಮ್ಮ ಮನೆಗೆ ಬಂದಾಗ ನೀನು ಅಳುತ್ತ  ಏನೋ ಹೇಳುತ್ತಿದ್ದೆ...'ನನಗೆ ಹೊಡೆದುಬಿಟ್ರಲ್ಲ ಅತ್ತೆ' ಎನ್ನುತ್ತಾ ಅಳುತ್ತ ಹೋಗಿದ್ದು ಕೇಳಿತು. ಶಾರದತ್ತೆ ನಿನಗೆ ಹೊಡೆದರಾ ಎಂದು ಶಾಕ್ ಆಯ್ತು. ಆಮೇಲೆ ನಾನು ಒಳಗಡೆ ಬರಲೇ ಇಲ್ಲ ...ಹಾಗೆ ವಾಪಸ್ ಬಂದುಬಿಟ್ಟೆ. ಆಮೇಲೆ ನಿನ್ನಲ್ಲಿ ಕೇಳೋಣ ಅಂದುಕೊಂಡಿದ್ದೆ. ವಾಣಿ ಹಾಗೆ ಕೇಳಿದಾಗ ಸುಮನಾಗೆ ಅದುಮಿಟ್ಟ ನೋವೆಲ್ಲ ಹೊರ ಉಕ್ಕಿ ಬಂದಂತಾಯ್ತು.
ವಾಣಿ ತುಂಬಾ ಒತ್ತಾಯಿಸಿದ ಮೇಲೆ ಸುಮನಾ ಹೇಳತೊಡಗಿದಳು. " ಏನಿಲ್ಲ ವಾಣಿ, ಹೇಳಲು ಹೋದರೆ ಇವೆಲ್ಲ ತುಂಬಾ ಚಿಕ್ಕ ವಿಷಯಗಳು.  ಆದರೂ ಕೆಲವೊಮ್ಮೆ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತವೆ.  ಸಚಿನ್ ನ ಕೀಟಲೆಗಳು ಇತ್ತೀಚೆಗೆ ತುಂಬಾ ಜಾಸ್ತಿ ಆಗಿದೆ ವಾಣಿ. ಅಮೂಲ್ಯಳಿಗಂತೂ ತುಂಬಾ ಗೋಳು ಕೊಡುತ್ತಾನೆ. ಮೊನ್ನೆ ಒಂದು ತಂಬಿಗೆಯ ತುಂಬಾ ತಣ್ಣೀರು ತುಂಬಿ ಅದರಲ್ಲಿ ಮರಳು ತುಂಬಿ ಆ ನೀರನ್ನೆಲ್ಲ ಅಮೂಲ್ಯಳ ತಲೆಯ ಮೇಲೆ ಸುರಿದಿದ್ದಲ್ಲದೇ ಅವಳಿಗೆ ತಂಬಿಗೆಯಿಂದಲೇ ಹೊಡೆದುಬಿಟ್ಟ. ತಲೆಯಲ್ಲಿ ರಕ್ತ ಕೂಡ ಬಂತು. ಅದಕ್ಕೆ ಸಚಿನ್ ಗೆ ನಾನು ಒಂದು ಏಟು ಕೊಟ್ಟೆ .  ಅದಕ್ಕೆ ನಮ್ಮತ್ತೆ ನನಗೆ ಹೊಡೆದು ಬಿಟ್ರು. ಅದಕ್ಕೆ ಆವತ್ತು ನಾನು ಅಳುತ್ತಿದ್ದುದು" ಎನ್ನುತ್ತಾ ಕಣ್ಣೋರೆಸಿಕೊಂಡಳು ಸುಮನ.


ಸಚಿನ್ ಶಾರದಮ್ಮನ ಮಗಳು ಪವಿತ್ರಾ ಳ ಮಗ. ಪವಿತ್ರ ಉದ್ಯೋಗ ಮಾಡುತಿದ್ದುದರಿಂದ ಮಗ ಸಚಿನ್ ನನ್ನು ಅಮ್ಮ ಶಾರದಮ್ಮನ ಬಳಿಯೇ ಬಿಟ್ಟಿದ್ದಳು.
ಸುಮನ ಹೆಣ್ಣು ಮಗುವನ್ನು ಹೆತ್ತಾಗ ಶಾರದಮ್ಮನಿಗೆ ಸ್ವಲ್ಪ ನಿರಾಶೆಯಾಗಿತ್ತು. ಮಗು ಅಮೂಲ್ಯಳ ಮೇಲೆ ತಾತ್ಸಾರವಿರದಿದ್ದರೂ ಮೊಮ್ಮಗಳು ಎಂದು ಮುದ್ದಾಡುವಂತ ಪ್ರೀತಿಯೂ ಇರಲಿಲ್ಲ. ಈಗ ಮೊಮ್ಮಗ ಹತ್ತಿರವೇ ಇದ್ದುದರಿಂದ ಅವರ ಪ್ರೀತಿಯೆಲ್ಲ ಮೊಮ್ಮಗನಿಗೆ ಮೀಸಲಾಗಿತ್ತು.


" ನನಗೆ ಸಚಿನ್ ನ ಮೇಲೆ ಕೋಪವಿಲ್ಲ ವಾಣಿ. ಅವನೂ ಕೂಡ ಚಿಕ್ಕ ಹುಡುಗ. ತಿಳಿಯದೆ ಈ ರೀತಿಯ ಕೀಟಲೆಗಳನ್ನು ಮಾಡುತ್ತಾನೆ. ಆದರೆ ನಾವು ದೊಡ್ಡವರು ಅದು ತಪ್ಪು ಎಂದು ಹೇಳದಿದ್ದರೆ ಮಕ್ಕಳು ತಾವು ಮಾಡಿದ್ದೇ ಸರಿ ಎಂದುಕೊಳ್ಳುವುದಿಲ್ಲವೇ?. ಈಗಾಗಲೇ ಅವನಿಗೆ ಆ ರೀತಿಯ ಯೋಚನೆ ಬಂದಿದೆ. ಕೆಲವೊಮ್ಮೆ ವಯಸ್ಸಿಗೆ ಮೀರಿದಂತ ಮಾತುಗಳನ್ನಾಡ್ತಾನೆ. ಎಲ್ಲೆ ಮೀರಿದಂತ ಕೀಟಲೆಗಳನ್ನು ಮಾಡ್ತಾನೆ. ಮಕ್ಕಳು ತಪ್ಪು ಮಾಡಿದಾಗ ದೊಡ್ಡವರು ತಿಳಿ ಹೇಳದೆ ಇದ್ದರೇ ಅದು ತಪ್ಪು ಎಂದು ಮಕ್ಕಳಿಗೆ ಹೇಗೆ ತಾನೇ ಅರ್ಥವಾಗುತ್ತದೆ  ? ಆಗ ಮಕ್ಕಳಿಗೆ ಒಳ್ಳೇ ಸಂಸ್ಕಾರ ನೀಡುವಲ್ಲಿ ನಾವು ವಿಫಲವಾದಂತಲ್ಲವೇ ?.  ಅವನೇನೂ ಮಾಡಿದರೂ ನಾನು ಏನೂ ಹೇಳುವಂತಿಲ್ಲ. ಅಮೂಲ್ಯಳನ್ನು ಅವನ ಕೀಟಲೆಗಳಿಂದ ಕಾಯ್ದುಕೊಳ್ಳುವುದೇ ದೊಡ್ಡ ಕೆಲಸವಾಗಿದೆ ನನಗೆ. ಇವೆಲ್ಲ ತುಂಬಾ ಚಿಕ್ಕ ವಿಷಯಗಳು ನಿಜ. ಆದರೆ ದೊಡ್ಡವರು ಈ ರೀತಿಯ ತಾರತಮ್ಯ ಮಾಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ವಾಣಿ". ಎಂದು ನೊಂದುಕೊಂಡಳು ಸುಮನಾ.
ಮುಂದೆ ಕೆಲವು ಸಂದರ್ಭಗಳಲ್ಲಿ ಶಾರದಮ್ಮನ ತಾರತಮ್ಯ ವಾಣಿಗೂ ಅರಿವಾಗಿತ್ತು.  ಏನೇ ತಿಂಡಿ ತಂದರೂ ಅದು ಮೊಮ್ಮಗನಿಗೆ ತಿಂದು ಉಳಿದರೆ ಮೊಮ್ಮಗಳಿಗೆ ಸಿಗುತ್ತಿತ್ತು.  ಮೊಮ್ಮಗ ಏನೂ ಮಾಡಿದರೂ ತಪ್ಪಲ್ಲ. ಆದರೆ ಮೊಮ್ಮಗಳು ಮಾಡಿದ್ದೇಲ್ಲವೂ ತಪ್ಪು...ಹೆಣ್ಣಾಗಿ ಹುಟ್ಟಿದ್ದಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂಬುದು ಶಾರದಮ್ಮನ ಅಂಬೋಣ .
ಹಿಂದಿನದನ್ನು ಯೋಚಿಸುತ್ತ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ವಾಣಿಗೆ ಮನೆ ತಲುಪಿದ್ದೂ ತಿಳಿಯಲಿಲ್ಲ.  ಹಿಂದಿನ ದಿನವಷ್ಟೆ ತೀರಿಹೋದ ಸುಮನಾಳ ನೆನಪೇ ಅವಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು.        ಸುಮನಾ ಳ ಡೈರಿಯನ್ನು ಆಗಷ್ಟೆ ಓದಿ ಬಂದಿದ್ದರಿಂದ ಮಗು ಅಮೂಲ್ಯಳ ಭವಿಷ್ಯದ ಯೋಚನೆ ಕಾಡತೊಡಗಿತ್ತು.
  ಶಾರದಮ್ಮನ ತಾರತಮ್ಯದ ಅರಿವಿದ್ದ ವಾಣಿಗೆ ಮಗಳನ್ನು ಇಂಥ ಪರಿಸರದಲ್ಲಿ ಬಿಟ್ಟು ಹೋಗುವುದಕ್ಕೆ ಸುಮನಾ ಪಟ್ಟ ಯಾತನೆಯ ಅರಿವಾಗಿತ್ತು. ವಾಣಿಯ ಮನಸ್ಸು ಯೋಚನೆಯ ಗೂಡಾಗಿತ್ತು.  ಕಾಲ ಎಷ್ಟು ಬದಲಾಗುತ್ತಿದೆ. ಈಗಿನ ದಿನಮಾನದಲ್ಲಿ ಹೆಣ್ಣು ಮಗು ಗಂಡು ಮಗು ಎಂದು ತಾರತಮ್ಯ ತೋರುವವರು  ಕಡಿಮೆ. ಆದರೂ ಕೆಲ ಜನರು ಶಾರದತ್ತೆಯಂಥವರು ಇನ್ನೂ ಆ ರೀತಿಯ ಮನೋಭಾವದಿಂದ ಹೊರಬಂದಿಲ್ಲ. ವಿಚಿತ್ರವೆಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೆ  ಹೆಣ್ಣುಮಗು ಹುಟ್ಟಿದ ತಕ್ಷಣ ತಾತ್ಸಾರ ತೋರುತ್ತಾರಲ್ಲಾ......ಎಂದುಕೊಂಡಳು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ನಿಜವಿರಬಹುದು ಅನ್ನಿಸಿತು.
                                                                    
                                                              *********************                                                       


ಅಂದು ರಾತ್ರಿ ನಿದ್ದೆಯಲ್ಲಿ ವಾಣಿಗೊಂದು ಕನಸು ಬಂತು.  ಶಾರದತ್ತೆಯೊಬ್ಬಳನ್ನು ಬಿಟ್ಟು ಬೇರೆ ಹೆಣ್ಣುಗಳೇ ಇಲ್ಲದಂತ,  ಪುರುಷರೇ ಇರುವ ಆ ಜಗತ್ತಿನಲ್ಲಿ ಶಾರದತ್ತೆ ಪಡುವ ಪಾಡು. ಆ ಭಯಾನಕ ಕನಸಿಂದ ಹೆದರಿದ ವಾಣಿ ಇದೇ ಕನಸು ಶಾರದತ್ತೆಗೂ ಬರಲಪ್ಪ ದೇವರೇ ಎಂದು ಬೇಡಿಕೊಂಡಳು..... :))

11 comments:

ಸಿಮೆಂಟು ಮರಳಿನ ಮಧ್ಯೆ March 15, 2010 at 9:18 AM  

ತುಂಬಾ ಭಾವುಕವಾಗಿದೆ...
ಯಾರ ಜೀವನದಲ್ಲೂ ಈ ಥರಹ ಆಗುವದು ಬೇಡ...

ಕಥೆ ಚೆನ್ನಾಗಿದೆ...
ಬರವಣಿಗೆಯ ಶೈಲಿಯೂ ಚೆನ್ನಾಗಿದೆ...

ಮೊದಲ ಪ್ರಯತ್ನದಲ್ಲಿಯೇ ಸಿಕ್ಸ್ ಹೊಡೆದಿದ್ದೀರಿ...

ಅಭಿನಂದನೆಗಳು....

ಸ್ವಲ್ಪ ಖುಷಿ ಕಥೆಯನ್ನೂ ಬರೆಯಿರಿ...

ಜಲನಯನ March 15, 2010 at 9:53 AM  

ಓ ಮನಸೇ ನಿನಗೆ ತರವೇ....ಗಂಡು ಮನಸನ್ನೂ ಕರಗಿಸಿ ಅಳುವಂತೆ ಮಾಡಿದ್ದು ...ಬಹಳ ಚನ್ನಾಗಿ ಓದಿಕೊಂಡುಹೋಗುವ ಶಿಲಿಯ ಕಥೆ...ಬರವಣಿಗೆ ಎಲ್ಲಾ ಇಷ್ಟವಾಯ್ತು...ನನಗೂ ಬಾಲ್ಯದ ಈ ಪುಣ್ಯಕೋಟಿಯ ಹಾಡು ನೆನಪಿದೆ...ಮನ ಕರಗುವ ಕಥೆ..ಅದಕ್ಕೆ ತಕ್ಕುದಾದ ಕಥೆಯನ್ನು ಹೆಣೆದಿದ್ದೀರಿ..ಮೊದಲ ಪ್ರಯತ್ನ..??!! ಸಾಧ್ಯವಿಲ್ಲ ಎನಿಸುವಹಾಗಿದೆ...ಅಭಿನಂದನೆಗಳು

ಮನದಾಳದಿಂದ March 15, 2010 at 12:17 PM  

ಇದು ನಿಮ್ಮ ಮೊದಲ ಪ್ರಯತ್ನ ಕಂಡಿತಾ ಅಲ್ಲ! ನೀವು ಕಥೆ ಹೆಣೆದ ರೀತಿ, ಸಾಹಿತ್ಯ, ನಿರೂಪಣಾ ಶೈಲಿ, ಅದ್ಭುತ!
ಕರುಳು ಕಿತ್ತು ಬರುವಂತ ಸನ್ನಿವೇಶ. ಒಮ್ಮೆ ಬಾವುಕನಾಗಿಬಿಟ್ಟೆ
ಹೀಗೆ ಮುಂದುವರೆಯಲಿ ನಿಮ್ಮ ಬರಹ
ಯುಗಾದಿಯ ಶುಭಾಶಯಗಳು.

Ranjita March 15, 2010 at 4:21 PM  

ನಮ್ಮನೆಯಲ್ಲಿ ಭಾವುಕತೆಗೆ ಹೆಸರಾದವರು ನಮ್ಮಕ್ಕ " ಚೇತನಾ ಭಟ್ ":) .. ( ಓ ಮನಸೇ ನೀನೇಕೆ ಹೀಗೆ ) ..
ಯಂಡಮೂರಿ ವೀರೇಂದ್ರನಾಥ್ ಅವರ ಬರವಣಿಗೆಯಿಂದ ಅತಿಯಾಗಿ ಪ್ರಭಾವಿತರಾದವರು ..
ಅದಿಕ್ಕೆ ಇರ್ಬೇಕು ನಿಮ್ಮ ಬರವಣಿಗೆ ಒಳ್ಳೆ ಬರಹಗಾರರಂತೆ ಮೂಡಿ ಬರ್ತಾ ಇದೆ
ಪುಣ್ಯಕೋಟಿಯ ಕತೆ ಅಂದ್ರೆ ಮನಸ್ಸು ಆಗಲೇ ಕಲಕಿಬಿಡತ್ತೆ ಅದನ್ನ ಮತ್ತಷ್ಟು ಭಾವುಕವಾಗಿ ಬರ್ದಿದ್ದೀರಿ .. ತುಂಬಾ ಚೆನ್ನಾಗಿದೆ ..
ನಿಮ್ಮ ಬರವಣಿಗೆಯ ಬ್ಲಾಗ್ ಪಯಣ ಹೀಗೆ ಸಾಗಲಿ ..

kuusu Muliyala March 15, 2010 at 7:06 PM  

ಮನ ಕರಗುವ ಕಥೆ,ನೀವು ಕಥೆ ಹೆಣೆದ ರೀತಿ,ಚೆನ್ನಾಗಿದೆ .ಅಭಿನಂದನೆಗಳು.
ಯುಗಾದಿಯ ಶುಭಾಶಯಗಳು.

ವಿ.ಆರ್.ಭಟ್ March 16, 2010 at 11:08 AM  

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

ಗುರು-ದೆಸೆ !! March 17, 2010 at 1:14 AM  

'ಓ ಮನಸೇ, ನೀನೇಕೆ ಹೀಗೆ...?' ಅವ್ರೆ..,

ಕ್ರೂರ ವಿಧಿಯ ಅಟ್ಟಹಾಸವನ್ನು ಕಣ್ಣಲ್ಲಿ ನೀರು ಜಿನುಗಿಸುವ ಹಾಗೆ ಬರೆದಿದ್ದೀರ..
ತುಂಬಾನೇ ಭಾವುಕದ ಕಥೆಯಾಗಿದ್ದು,ಎಲ್ಲೂ ಬೇಸರ ತರಿಸದೇ ಸಾಗುತ್ತದೆ.

ಮತ್ತೊಂದು ವಿಷಯ..: ಪ್ರತಿಕ್ರಿಯೆ ನೀಡಲು ನಿಮ್ಮ ಬ್ಲಾಗಿನಲ್ಲಿ funny,interesting,cool ಇಷ್ಟು ಮಾತ್ರ ಆಯ್ಕೆಗಳಿವೆ.., ಆದ್ದರಿಂದ ಇನ್ನೊಂದು ದುಃಖಕರ ಆಯ್ಕೆ ಸೇರಿಸುವಿರಾ.ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

ಓ ಮನಸೇ, ನೀನೇಕೆ ಹೀಗೆ...? March 22, 2010 at 6:25 AM  

ಪ್ರಕಾಶಣ್ಣ...ನಿಮ್ಮ ಕಾಮೆಂಟ್ ಗೆ ತುಂಬಾ ಧನ್ಯವಾದಗಳು. ಈ ಕಥೆ ಬರೆಯುವಾಗ ನೀವು ಕೊಟ್ಟ ಸಲಹೆ , ಪ್ರೋತ್ಸಾಹಕ್ಕೆ ನಾನು ಸದಾ ಋಣಿ. ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು .

ಓ ಮನಸೇ, ನೀನೇಕೆ ಹೀಗೆ...? March 22, 2010 at 6:31 AM  

ಆಜಾದ್ ಭಯ್ಯಾ, ಪ್ರವೀಣ್ ಸರ್, ರಂಜಿತಾ, ಮುಳಿಯಾಳ ಸರ್, V R Bhat sir, ಗುರು ದೆಸೆ ...ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.

ಅರವಿಂದ್ October 13, 2010 at 2:24 AM  

ಚೇತನ,

ಕಥೆ ತುಂಬಾ ಚೆನ್ನಾಗಿದೆ, ಕಥನ ಮನಮುಟ್ಟಿತು. ಗೋವಿನ ಹಾಡು ನೆನಪಿಸಿದಕ್ಕಾಗಿ ವಂದನೆಗಳು.

ಅರವಿಂದ್

ಓ ಮನಸೇ, ನೀನೇಕೆ ಹೀಗೆ...? October 13, 2010 at 2:42 AM  

ಕಥೆ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಅರವಿಂದ್. ನಿಜ ....ಆ ಪುಣ್ಯಕೋಟಿಯ ಹಾಡು ನನಗೆ ಕೂಡ ತುಂಬಾ ಆತ್ಮೀಯವಾದ , ಅಂತರಂಗ ಮುಟ್ಟುವಂತ ಹಾಡು. ಆ ತಾಯಿ ಕರುಳಿನ ನೋವು, ಆದಾಗ್ಯೂ ಸತ್ಯ, ನ್ಯಾಯ, ಇವುಗಳನ್ನು ಬಿಡದಂತ ಗೋವಿನ ಸತ್ಯಪರತೆ. ನಾನು ತುಂಬಾ ಮೆಚ್ಚಿದ ಕಥೆ ಇದು.

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com