ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಆ ಘಟನೆ ನಡೆದು ಇಂದಿಗೆ ಹತ್ತು ವರ್ಷ !





ಅಂದು ಅವಳ ನಿಶ್ಚಿತಾರ್ಥ. ಮನೆ ತುಂಬಾ ನಗು ಸಡಗರ. ಅವಳ ಗೆಳತಿಯರೋ ಅವಳನ್ನು ಛೇಡಿಸಿದ್ದೇ ಛೇಡಿಸಿದ್ದು. ಅವಳ ಗೆಳತಿಯರು ಹಾಗೂ ತಂಗಿಯರದೇ ಕಲರವ ನಿಶ್ಚಿತಾರ್ಥದ ಮನೆ ತುಂಬಾ.
ಹಾಸ್ಯ ನಗು ಹರಟೆಯ ನಡುವೆ ಇಣುಕುತಿದ್ದ ಸಣ್ಣ ಬೇಸರ ಏನಪ್ಪಾ ಅಂದ್ರೆ ಇನ್ನು ಮುಂದೆ ಗೆಳತಿಯರೆಲ್ಲಾ ಬೇರೆ ಬೇರೆಯಾಗಿಬಿಡ್ತಾರಲ್ಲ ಅಂತ. ಅದಾಗಲೇ ಅವಳ ಇನ್ನೊಬ್ಬಳು ಗೆಳತಿಗೂ ಮದುವೆ ನಿಶ್ಚಯ ಆಗಿದ್ದು, ಇನ್ನು ಎಲ್ಲರೂ ಹೀಗೆ ಒಟ್ಟಿಗೆ ಸೇರುವುದು ಯಾವಾಗಲೋ ಎಂಬ ಬೇಸರ. ಅಂತೂ ನಿಶ್ಚಿತಾರ್ಥ ಕುಶಿ ಕುಶಿಯಿಂದ ಮುಗಿಯುವಷ್ಟರಲ್ಲಿ ಒಂದು ಪ್ಲಾನ್ ರೆಡೀ ಮಾಡಿಯೆಬಿಟ್ಟರು. 
ಮರುದಿನವೇ ಲಕ್ಕಿಕುಣಿ ಫಾಲ್ಸ್ ಗೆ ನಿಶ್ಚಿತಾರ್ಥಕ್ಕೆ ಬಂದಿದ್ದ ನೆಂಟ ರಾಮಣ್ಣನ ಜೀಪ್ ನಲ್ಲಿಯೇ ಹೋಗುವುದೆಂದು ಪ್ಲಾನಿಸಿ ಆಗಲೇ ಅರೇಂಜ್ ಮೆಂಟ್ ಶುರುಮಾಡಿಬಿಟ್ಟಿದ್ದರು. ಮರುದಿನ ಟ್ರಿಪ್ ನಲ್ಲಿ ನಗೆ ಬಾಂಬ್ ಗಳದೇ ಸಿಡಿತ.
"ಇನ್ನೊಂದು ತಿಂಗಳು ನನ್ನದು ಉಪವಾಸ, ಇವಳ ಮದುವೆಯಲ್ಲಿಯೇ ತಿಂಗಳಪೂರ್ತಿಯ ಊಟ" ಅಂತ ಮಂಜು ಹೇಳಿದರೆ ಇವಳು ಸುಮ್ಮನಿದ್ದಾಳೆಯೇ.
"ಹಾಗೆ ಮಾಡು ಬೇಡ ಅನ್ನಲ್ಲ. ಆದ್ರೆ ಉಡುಗೊರೆ ತಕ್ಕಂತೆ ಊಟ ಅಂತ ಮದುವೆ ಕರೆಯೋಲೆಯಲ್ಲಿಯೇ ಬರೆಸಿಬಿಡ್ತೀನಿ, ಹಾಗಾಗಿ ಒಳ್ಳೆ ಉಡುಗೊರೆ ರೆಡೀ ಇಟ್ಕೋ" ಅಂತ ಇವಳು...ನಗುವೋ ನಗು.
ಅಂತೂ ಹರಟೆ ಹಾಸ್ಯದ ಹೊಳೆ ಹರಿದು ಜಲಪಾತ ರಂಗೇರಿತ್ತು. ಸೂರ್ಯ ಪಡುವಣದತ್ತ ಸರಿಯುತ್ತಿದ್ದಂತೆ ಎಲ್ಲಾ ವಾಪಸ್ ಹೊರಟರೆ ಎಲ್ಲರಿಗೂ ಸುಸ್ತೋ ಸುಸ್ತು. ಕಲ್ಲು ಬಂಡೆಗಳಿಂದ ತುಂಬಿ ಹೋಗಿದ್ದ ಆ ದುರ್ಗಮ ದಾರಿ ಸವೆಸುವುದು ಬರುವಾಗಿನಷ್ಟು ಸುಲಭವೆನಿಸಲಿಲ್ಲ.!
ಇನ್ನೇನು ಜೀಪ್ ನಿಲ್ಲಿಸಿದ್ದ ಜಾಗಕ್ಕೆ ತಲುಪಿಬಿಟ್ಟೆವು ಅನ್ನುವಷ್ಟರಲ್ಲಿ ನಿಶ್ಚಿತಾರ್ಥದ ಹುಡುಗಿ ಒಂದು ಕಲ್ಲಿಗೆ ಕಾಲೇಡವಿಕೊಂಡು ಬಿದ್ದು ಬಿಟ್ಟಳು. ಮುಂದಿದ್ದ ಬಂಡೆಗಲ್ಲಿಗೆ ಮುಖ ಬಡಿದು ಒಮ್ಮೆ ನಕ್ಷತ್ರ ಲೋಕಕ್ಕೆ ಹೋದಂತಾಗಿ ಅಲ್ಲೇ ಕುಸಿದಳು. ಎಲ್ಲರೂ ಗಾಭರಿ. ಒಂದೇ ಕ್ಷಣದಲ್ಲಿ ಹುಡುಗಿಯ ಮುಖ ಆಂಜನೇಯ ಸ್ವಾಮಿಯ ಮುಖದಂತೆ ಊದಿಕೊಂಡಿತ್ತು. ತುಟಿಗೆ ಪೆಟ್ಟಾಗಿದ್ದರಿಂದ ಸಂಪೂರ್ಣವಾಗಿ ಊದಿಕೊಂಡು ಮೂಗಿನವರೆಗೆ ಬಂದಿತ್ತು. ಹಣೆಯಿಂದಲೂ ರಕ್ತ ಸುರಿಯುತ್ತಿತ್ತು. ಅವಳ ತಂಗಿಯರು ಗೆಳತಿಯರೆಲ್ಲ ಗಾಭರಿಗೊಂಡು ಅಳತೊಡಗಿದರೂ ಅವಳು ಧೈರ್ಯವಾಗೆ ಇದ್ದಳು. ರಾಘಣ್ಣ ತನ್ನ ಹೆಗಲಿಗಿದ್ದ ಟವೇಲನ್ನು ಅವಳ ಹಣೆಗೆ ಸುತ್ತಿ ಹೀರೋಯಿಕ್ ಆಕ್ಟ್ ಮೆರೆದಿದ್ದ. ಅಂತೂ ಎಲ್ಲರೂ ಜೀಪ್ ಹತ್ತಿ ಯಾವ ಹಾಸ್ಪಿಟಲ್ ಗೆ ಹೋಗಬೇಕೆಂದು ಚರ್ಚಿಸುತ್ತಾ ಮನೆಗೆ ಫೋನ್ ಮಾಡಿ ಅವಳ ಅಪ್ಪ ಅಮ್ಮನಿಗೆ ವಿಷಯ ತಿಳಿಸಬೇಕೆಂದು ಮಾತನಾಡಿಕೊಳ್ಳುತ್ತಿರುವಾಗ ದುಃಖ ಒತ್ತರಿಸಿ ಬಂದಿತ್ತು ಅವಳಿಗೆ.
"ಮದುವೆ ನಿಶ್ಚಿತಾರ್ಥ ದ ಸಂತೋಷದ ಗುಂಗಿನಲ್ಲಿಯೇ ಇರುವ ಅಪ್ಪ ಅಮ್ಮಂಗೇ ಈ ಮುಖ ಹೇಗೆ ತೋರಿಸಲಿ. ಅವರ ಆ ಸಂತೋಷವನ್ನು ಕಸಿದು ಈ ನೋವನ್ನ ಕೊಡ್ತಿದೀನಲ್ಲ" ಎಂದುಕೊಳ್ಳುತ್ತಾ ಮುಖ ಮುಚ್ಚಿಕೊಂಡು ಅತ್ತಳು. ಹಾಸ್ಪಿಟಲ್ ಗೆ ಹೋಗಿ ಡಾಕ್ಟರ್ ಬಾಯಿಂದ "ಏನೂ ತೊಂದರೆಯಿಲ್ಲ. ಸ್ಕಿನ್ ಕಟ್ ಆಗಿದ್ದಷ್ಟೆ. ಮುಖವಾದ್ದರಿಂದ ಸ್ವಲ್ಪ ಜಾಸ್ತಿ ಊದಿಕೊಂಡಿದೆ" ಎಂದು ಕೇಳಿದಾಗಲೆ ಎಲ್ಲರೂ ಸ್ವಲ್ಪ ನಿರಾಳವಾಗಿದ್ದು. ತುಟಿಗೆ ಎರಡು ಹೊಲಿಗೆ ಹಣೆಗೆ ಮೂರು ಹೊಲಿಗೆ ಹಾಕಿಸಿಕೊಂಡು ಮನೆ ಕಡೆ ಹೊರಟರೂ ಅಮ್ಮನಿಗೆ ಮುಖ ಹೇಗೆ ತೋರಿಸಲಿ ಅಂತಲೇ ಅವಳ ಅಳು. ಮನೆ ತಲುಪುತ್ತಿದ್ದಂತೆ ಆಗಲೇ ಫೋನ್ ನಿಂದ ವಿಷಯ ತಿಳಿದ ಅಮ್ಮ ಅಪ್ಪ ಮನೆ ಹೊರಗೆಯೇ ನಿಂತು ಕಾಯುತ್ತಿದ್ದರು. ಅವಳಿಗೆ ಅದಾಗಲೇ ವೀಪರೀತ ಊದಿಕೊಂಡ ತುಟಿಯಿಂದಾಗಿ ಮುಖ ಆಕಾರ ಕಳೆದುಕೊಂಡಿತ್ತು. ಅಲ್ಲಿಯವರೆಗೂ ತನ್ನ ದುಪಟ್ಟಾದಿಂದ ಮುಖ ಮುಚ್ಚಿಕೊಂಡಿದ್ದ ಅವಳು ಅಪ್ಪ ಅಮ್ಮನೆದುರೂ ದುಪಟ್ಟಾವನ್ನು ಮುಖದಿಂದ ತೆಗೆಯದೇ ಅಳುತ್ತಾ ಹಾಗೆ ಅಮ್ಮನ ಹೆಗಲಿಗೊರಗಿದರೆ ಅಮ್ಮನದು ಎಂದಿನಂತೆ ಧೈರ್ಯ ತುಂಬುವ ನುಡಿಗಳು. "ಎಂತದೂ ಆಗ್ತಿಲ್ಲೇ, ದೇವರಿದ್ದ, ಕಾಪಾಡ್ತಾ. ಅಳದೆಂತಕ್ಕೆ. ಸುಮ್ಮನಿರು". ಅಂತ ಹೇಳ್ತಾ ಅಮ್ಮ ಸೀದಾ ದೇವರ ಕೋಣೆಗೆ ಕರೆದೊಯ್ದು ದೇವರಿಗೆ ನಮಸ್ಕಾರ ಮಾಡಿಸಿ ರೂಮ್ ಗೆ ಕರೆದುಕೊಂಡು ಹೋಗಿ ಮಲಗಿಸಿದ್ದರು. ಅಮ್ಮ ಒಳಗೆ ಎಷ್ಟು ದುಃಖಿಸುತ್ತಿರಬಹುದೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಮಕ್ಕಳಿಗೆನಾದರೂ ಆದರೆ ಅಥವಾ ಊಟ ಮಾಡದೆ ಮಲಗಿದರೆ ಅಮ್ಮ ಪಡುವ ಸಂಕಟ ಅವಳಿಗೆ ಚೆನ್ನಾಗಿ ಗೊತ್ತು. ಈಗಂತೂ ಹೊರತೋರಗೊಡದೆ ಎಲ್ಲರಿಗೂ ಧೈರ್ಯ ಹೇಳಿದರೂ ಒಳಗೊಳಗೆ ಅದೆಷ್ಟು ನೋವು ಪಡುತ್ತಾಳೆಂದೂ ಗೊತ್ತು.
ಅದರ ಜೊತೆ ಈಗ ಅಪ್ಪ ಅಮ್ಮ ಊರವರ ನೆಂಟರಿಷ್ಟರ ಪ್ರಶ್ನೆ ಎದುರಿಸುವ ಬಗ್ಗೆಯೂ ನೋವು. ಅಂದಿಗೆ ಅವಳ ಮದುವೆಗೆ ಸರಿಯಾಗಿ 34 ದಿನಗಳಿದ್ದವು. ಅವಳ ಗಾಯಗೊಂಡ ಮುಖ ನೋಡಲು ಬಂದವರಿಗ್ಯಾರಿಗೂ ಅವಳು ಮುಖ ತೋರಿಸದೆ ಹೋದರೂ ಹಲವರು ಮದುವೆ ನಡೆಯುವುದೇ ಅನುಮಾನ ಅನ್ನುವಷ್ಟರ ಮಟ್ಟಿಗೆ ಮಾತನಾಡಿ ಹೋದಾಗ ಮುಂಚಿನ ದಿನವಷ್ಟೇ ನಿಶ್ಚಿತಾರ್ಥದ ನಗೆ ತುಂಬಿದ ಮನೆಯಲ್ಲಿ ಮೌನದ ನೆರಳು ಕಾಡಿತ್ತು.
ಮಾರನೆಯ ದಿನ ಮೈಸೂರ್ ಗೆ ವಾಪಸ್ಸಾದ ಹುಡುಗ ಫೋನ್ ಮಾಡಿದಾಗ ಫೋನ್ ರಿಸಿವ್ ಮಾಡಿದ ತಂಗಿ  ಅಕ್ಕನಿಗೆ ಜ್ವರ ಎಂದು ಹೇಳಿ ಫೋನ್ ಇಟ್ಟಿದ್ದಳು.
ಅದರ ನೆಕ್ಸ್ಟ್ ಡೇ ಮದುವೆ ಹುಡುಗ ಮತ್ತೆ ಫೋನ್ ಮಾಡಿದಾಗ ಅವಳ ಅಪ್ಪ ವಿಷಯ ತಿಳಿಸಿದ್ದರು. ಗಾಭರಿಯಾದ ಹುಡುಗ ತನ್ನ ತಮ್ಮನನ್ನು ಕಳಿಸುತ್ತೇನೆಂದಾಗ "ದಯವಿಟ್ಟು ಈ ವಾರ ಬೇಡ, ಮುಂದಿನ ವಾರ ಬರ ಹೇಳಿ" ಎಂದು ಹೇಳಿ ಮುಂದಿನವಾರ ಬಂದ ಹುಡುಗನ ತಮ್ಮನೊಡನೆ ಮಾತುಕತೆ ನಡೆಸಿದಾಗಲೆ ಅಪ್ಪ ಅಮ್ಮನ ಮನಸ್ಸಿಗೆ ಸ್ವಲ್ಪ ನಿರಾಳ.

ಅವಳಿಗೋ ಜೀವನದ ಅನಿಶ್ಚಿತತೆಯ ಬಗ್ಗೆ ಸಾವಿರ ಯೋಚನೆಗಳು. ಸುಖ ದುಃಖ ಬದುಕಿನ ಎರಡು ಮುಖ ಎಂಬುದರ ಬಗ್ಗೆ ತುಂಬಾ ಯೋಚಿಸುವಂತೆ ಮಾಡಿತ್ತು ಆ ಘಟನೆ.
ಅಂತೂ ಅಪ್ಪ ಅಮ್ಮ ಹಿರಿಯರು ಹಾಗೂ ದೇವರ ಆಶೀರ್ವಾದದಿಂದ ಮತ್ತೆನೂ ತೊಂದರೆಯಾಗದೆ ನಿರ್ವಿಘ್ನವಾಗಿ ಮದುವೆ ನೆರವೇರಿತ್ತು.
ಈಗ ಅವಳ 6 ವರ್ಷದ ಮಗ ಸೃಜನ್ ಮುಖದ ಮೇಲಿನ ಕಲೆಯ ಬಗ್ಗೆ ಕೇಳಿದಾಗೆಲ್ಲಾ ಮತ್ತೊಮ್ಮೆ ಆ ಕ್ಷಣಗಳಿಗೆ ಹೋಗಿ ಬರುತ್ತಾಳೆ ಅವಳು. ಹೀಗೆ ಕಥೆಯಾಗಿಸಿ ಮಗನಿಗೆ ಹೇಳುತ್ತಾಳೆ.
ಇಂದಿಗೆ ಈ ಘಟನೆ ನಡೆದು 10 ವರ್ಷಗಳು.
ದೂರದ ಲಂಡನ್ ನಲ್ಲಿ ಕುಳಿತು ಹಳೆಯ ಫೋಟೋಗಳನ್ನೆಲ್ಲಾ ನೋಡುತ್ತಾ
.........  ಆ ಘಟನೆ ಮುಖದ ಮೇಲೆ ಉಳಿಸಿ ಹೋದ  ಕಲೆ ಕಲಾಕೃತಿಗಳ  ನೋಡಿದೊಡನೆ
................. ಹೀಗೆಯೇ ಮತ್ತೊಮ್ಮೆ ಕಾಡುವ ಆ ಸುಖ ದುಃಖಗಳ ನೆನಪುಗಳಲ್ಲಿ ಇಳಿಯುತ್ತಾಳೆ.
......................................ದೇವರೆಂಬ ಶಕ್ತಿ  ಸೃಷ್ಟಿಸಿರುವ ವಿಧಿಲೀಲೆಗಳ ಬಗ್ಗೆ ಚಿಂತನೆಗೆ ಬೀಳುತ್ತಾಳೆ.

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com