
(ಚಿತ್ರ ಕೃಪೆ : 123RF.com)
ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ
ನೆನಪುಗಳೆ ಹಾಗೆ ಕೆಲವೊಮ್ಮೆ ಜಡಿಮಳೆಯಂತೆ
ಬೇಡವೆಂದರೂ ಬಿಡದೆ ಸುರಿದು
ತಿಳಿಯಾದ ಕೊಳವನು ಕಲಕಿ
ಕೊಳೆಯ ರಾಡಿಯೆಬ್ಬಿಸಿಬಿಡುತ್ತವೆ.
ನೆನಪುಗಳೆ ಹಾಗೆ ಕೆಲವೊಮ್ಮೆ ಮುಂಗಾರು ಮಳೆಯಂತೆ
ಪರಿಮಾಣದಲಿ ಸುರಿದು
ಪ್ರತಿಹೆಜ್ಜೆಯನೆಚ್ಚರಿಸಿ ಪಕ್ವತೆಯೆಡೆ ನಡೆಸಿ
ನವತೆನೆಗಳ ಬೆಳೆಸಿ ಹಸನಾಗಿಸುತ್ತವೆ.
ನೆನಪುಗಳೆ ಹಾಗೆ ಅನಿಯಮಿತ ಮಳೆಯಂತೆ
ಶುಭ್ರಗೊಳಿಸಿದಂತೆಯೇ
ಕಲಕಿಯೂ ಬಿಡುತ್ತವೆ ಒಮ್ಮೊಮ್ಮೆ
ಮಳೆಸುರಿದ ನಂತರದ ಹೊಂಗಿರಣದ ಅನುಭವ ನೀಡಿ
ಹೊಸಕನಸುಗಳಿಗೆ ನಾಂದಿಯಾಗುತ್ತವೆ ಕೆಲವೊಮ್ಮೆ.