ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಯಂಡಮೂರಿ! ನಿಮ್ಮ ಬರಹಗಳು ನನ್ನೊಳಗಿವೆ..

ನಾನು ಚಿಕ್ಕವಳಿದ್ದಾಗ ಕಥೆ ಕಾದಂಬರಿ ಓದಲು ಶುರು ಮಾಡುವ ಸಮಯಕ್ಕೆ ನನ್ನ ಕೈಗೆ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಗಳು. ನನ್ನ ತಂದೆಗೆ ಯಂಡಮೂರಿಯವರ ಬರಹಗಳು ಇಷ್ಟವಾಗಿದ್ದ ಕಾರಣ ಮನೆಯಲ್ಲಿ ಯಂಡಮೂರಿಯವರ ಸಾಕಷ್ಟು ಪುಸ್ತಕಗಳಿದ್ದವು. ಅವರ ಬರಹಗಳನ್ನು ಓದುತ್ತಾ ಓದುತ್ತಾ ಅದೆಷ್ಟು ಅವರ ಅಭಿಮಾನಿಯಾದೇನೆಂದರೆ ಸ್ವಲ್ಪ ಸೂಕ್ಷ್ಮ ಮನಸ್ಸಿನವಳಾಗಿದ್ದ ನಾನು,  ನನಗೆ ಮನಸ್ಸಿಗೆ ಕಷ್ಟವೆನಿಸಿದಾಗೆಲ್ಲಾ ಓಡಿ ಹೋಗಿ ಹಿಡಿದುಕೊಳ್ಳುತ್ತಿದ್ದುದು ಯಂಡಮೂರಿಯವರ ಕೆಲವು ಆಯ್ದ ಪುಸ್ತಕಗಳನ್ನಾಗಿತ್ತು. ಅವನ್ನು ಓದಿದೊಡನೆಯೇ ಮನಸ್ಸಿಗೆ ಎಷ್ಟು ಸಮಾಧಾನ ಸಿಗುತ್ತಿತ್ತೆಂದರೆ .....
ಮನಸಿಗೆ ತುಂಬಾ ನೋವಾದಾಗ ಇದು ಸಹಜ ಮನಸ್ಸಿಗೆ ನೋವು ನಲಿವು ಎರಡೂ ಇರಬೇಕು ಎಂದು ಮನಸ್ಸನ್ನು ಘನವಾಗಿಸಿದವರು ಯಂಡಮೂರಿ, ಸಂಬಂಧಗಳೇ ಇಷ್ಟು ಅನಿಸಿದಾಗ ನನ್ನಂತೆ ಸುತ್ತಲಿರುವವರೆಲ್ಲರೂ ಮನುಷ್ಯರೇ ಎಂದು ಜ್ನಾಪಿಸಿಕೊಟ್ಟಿದ್ದು ಅವರು, ನಾನೇನೂ ಮಾಡಲಾರೆ ನನ್ನಿಂದೇನೂ ಸಾಧ್ಯವಿಲ್ಲ ಎಂದು ಕುಸಿದಾಗ ಆತ್ಮವಿಶ್ವಾಸ ತುಂಬುತ್ತಿದ್ದುದು ಅವರು, ಸುತ್ತಲಿರುವವರ ಮೇಲೆ ಸಿಟ್ಟುಬಂದಾಗ ನಿನ್ನಲ್ಲೂ ಕೂಡ ತಪ್ಪಿರಬಹುದು ಕುಳಿತು ಯೋಚಿಸು ಎಂದು ಸ್ವವಿಮರ್ಶೆಗೆ ದೂಡಿದ್ದು ಅವರು, ಕೊಂಕು ಮಾತುಗಳಿಗೆ ಮನಸ್ಸು ಮುದುಡಿದಾಗ ಇದೂ ಕೂಡ ಜಗದ, ಜೀವನದ ಒಂದು ಭಾಗ ಎಂಬ ವೈರಾಗ್ಯ ರಸವನ್ನು ಕುಡಿಸಿದ್ದು ಅವರು, ಭಾನಲ್ಲಿ ಹಾರುವ ಆಸೆ ಆದಾಗ ಮನಸಿಗೆ ರೆಕ್ಕೆ ಕಟ್ಟಿಕೊಟ್ಟವರೂ ಅವರೇ, ಮೊದಲ ಪ್ರೇಮದ ಅಮಲಿಂತೆ ಅವರ ಬರಹಗಳು,

ಧನ್ಯವಾದ ಎಂಬುದು ಬಲು ಚಿಕ್ಕ ಪದ..!!

ಹೀಗೊಂದು ಅರ್ಧ ಬರೆದಿಟ್ಟ ವಂದನಾರ್ಪಣೆ..:)

ಒಂಥರಾ ಇದೊಂಥರಾ

IMG_5544


ಇದ್ದರೋಂತರ ಇಲ್ಲದಿರೆ ಇನ್ನೊಂತರ

ಇದ್ದರೂ ಇಲ್ಲದಿರುವಂತಿರುವುದಿನ್ನೋಂತರ

ಇಲ್ಲದೆಯೂ ಇರುವಂತೆ ತೋರಿಕೆಯೊಂತರ

ಇದ್ದರೂ ಇಲ್ಲದಿರುವುದರ ಚಿಂತೆಯೋಂತರ

ಇಲ್ಲದಿರೆ ಇರುವ ನಿರಾಳತೆಯೊಂತರ

ಇರುವುದರೆಡೆ ಅತೃಪ್ತಿಯೊಂತರ

ಇಲ್ಲದಿರುವುದರೆಡೆ ಆಸಕ್ತಿಯೊಂತರ

ಇರುವುದರೆಡೆ ಸಂತೃಪ್ತಿಯೊಂತರ

ತರ ತರದ ಬದುಕು ಇದು

ಇಂದೋಂತರ ನಾಳೆಯಿನ್ನೋಂತರ

ಇರುವುದು ಇಲ್ಲದಿರುವುದರ ನಡುವೆ

ಜೋಕಾಲಿಯ ತರ.

ಇಲ್ಲದಿರುವುದರ ಕಡೆ

ಜೀಕುತಲೇ ಇರುವ ಮನ

ಒಮ್ಮೆ ಈ ತರ ಇನ್ನೊಮ್ಮೆ ಆ ತರ


ಆಸೆ ನಿರಾಸೆಗಳು ನಿತ್ಯ ನಿರಂತರ

ಲಹರಿ

IMG_5149
ಹಲವು ಭಾವಗಳು
ಮನದ ಹಲುಬುವಿಕೆ
ಮೊಗ್ಗಿನಲೆ ಮುದುಡಿಹೋದವೆಷ್ಟೋ
ಹೂವಾಗರಳಿ ಉದುರಿದವೆಷ್ಟೋ,
ಮೊಗ್ಗು ಹೂವುಗಳಾಗಿ ಫಲ
ನೀಡಿದ ಲಹರಿಗಳೆಷ್ಟೋ,
ಎಲ್ಲವೂ ಫಲಿಸಲೇಬೇಕೆಂಬ
ನಿಯಮವೇನೂ ಇಲ್ಲ,
ಹಲಕೆಲವು ಲಹರಿಗಳು
ಆರೆಗತ್ತಲಲಿ ಕ್ಷಣ ಮಾತ್ರ
ಮಿನುಗಿ ಹೋದ ಸಣ್ಣ ಮಿಂಚಂತೇ,
ಮರುಕ್ಷಣವೇ ಅನುಮಾನ
ಮಿಂಚು ಮಿನುಗಿದ್ದು ನಿಜವಾ ಭ್ರಮೆಯಾ!!,
ಆಕಾರಲ್ಲದೆಯೇ ಮೂಡಿದ ನೆರಳಂತೆ
ಅಸ್ಪಷ್ಟವೇ ಇರಲಿ ಬೇಸರವಿಲ್ಲ
ಬಿಸಿಲು ಬೆಳಕಿನ ಹಗಲಿಗಿಂತ
ಕೆಲವೊಮ್ಮೆ....
ಮಂಜು ಮುಸುಕಿದ
ಮಬ್ಬು ಕವಿದ ಮುಂಜಾವೇ ಇಷ್ಟ.

ಕಪ್ಪು ಬಿಳುಪಷ್ಟೆ ಅಲ್ಲ
ಎಲ್ಲ ಬಣ್ಣಗಳ ಹಲವು ಸುರುಳಿಗಳು
ಹೀಗೆಯೇ ದಡ ಸೇರದ
ಆಗೀಗ ಸುಳಿದು ಹೋಗುವ
ಸಾವಿರ ಪುಟ್ಟ ಪುಟ್ಟ ಅಲೆಗಳ ಪೂರ
ಮನವೆಂಬ ಮಹಾಸಾಗರ.

ನೆನಪುಗಳೇ ಹೀಗೆ

7061475
(ಚಿತ್ರ ಕೃಪೆ : 123RF.com)

ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ

ನೆನಪುಗಳೆ ಹಾಗೆ ಕೆಲವೊಮ್ಮೆ ಜಡಿಮಳೆಯಂತೆ
ಬೇಡವೆಂದರೂ ಬಿಡದೆ ಸುರಿದು
ತಿಳಿಯಾದ ಕೊಳವನು ಕಲಕಿ
ಕೊಳೆಯ ರಾಡಿಯೆಬ್ಬಿಸಿಬಿಡುತ್ತವೆ.

ನೆನಪುಗಳೆ ಹಾಗೆ ಕೆಲವೊಮ್ಮೆ ಮುಂಗಾರು ಮಳೆಯಂತೆ
ಪರಿಮಾಣದಲಿ ಸುರಿದು
ಪ್ರತಿಹೆಜ್ಜೆಯನೆಚ್ಚರಿಸಿ ಪಕ್ವತೆಯೆಡೆ ನಡೆಸಿ
ನವತೆನೆಗಳ ಬೆಳೆಸಿ  ಹಸನಾಗಿಸುತ್ತವೆ.

ನೆನಪುಗಳೆ ಹಾಗೆ ಅನಿಯಮಿತ ಮಳೆಯಂತೆ
ಶುಭ್ರಗೊಳಿಸಿದಂತೆಯೇ
ಕಲಕಿಯೂ ಬಿಡುತ್ತವೆ ಒಮ್ಮೊಮ್ಮೆ
ಮಳೆಸುರಿದ ನಂತರದ ಹೊಂಗಿರಣದ ಅನುಭವ ನೀಡಿ
ಹೊಸಕನಸುಗಳಿಗೆ ನಾಂದಿಯಾಗುತ್ತವೆ ಕೆಲವೊಮ್ಮೆ.


(ಕೆಂಡಸಂಪಿಗೆಯಲ್ಲಿ ಪ್ರಕಟಿತ. http://kendasampige.com/article.php?id=4939)

ಸಂಸಾರ ಸಮರ – ಮಡದಿಯ ಮುನಿಸು

ಛಾಯಾಚಿತ್ರ ಕೃಪೆ : ಅಂತರ್ಜಾಲ.

ಮುನಿಸು ತರವೇ ಮನದನ್ನೆ ಅಂದದಾ ಮೊಗದಲ್ಲಿ
ಕಿಡಿ ಕಾರುತಿವೆ ನಯನಗಳು ಸಿಡಿವ ಸೂರ್ಯನಂತೆ
ನಗು ಸೂಸುವಾ ಮೊಗವಿಂದು ಉಗ್ರವಾಗಿದೆಯಲ್ಲ
ಕೋಪಶಮನಗೊಳಿಸುವ ದಾರಿಯನು ಹೇಳೇ ಕಾಂತೆ .


ನನ್ನ ಬೈದು, ನೀ ನಕ್ಕು ಹಗುರವಾಗಬಹುದಾದರೆ,
ಬೈಗುಳವೂ  ಕೂಡ ಹಿತವೆನಗೆ, ನಗುತಿರು ಸುಮತಿ 
ನನ್ನ ಹಂಗಿಸಿ ನೀನು ತೃಪ್ತಿ ಪಡುವುದಾದಲ್ಲಿ
ಆ ತೃಪ್ತಿಯೂ ಸದಾ ನಿನಗಿರಲಿ ಗೆಳತಿ.

ನಿನ್ನ ಮನದಲೇ ನೆಲೆಸಿ ಆಳ ಅಳೆದಿಹೇನು ನಾನು .....
ಕಲ್ಮಷವೊಂದಿಷ್ಟಿಲ್ಲ ತಿಳಿದಿಹುದು ಎನಗೆ..
ನೀ ಹೇಳಿದಾ ಮಾತ ಕೆಳದೇ ಇದ್ದಾಗ
ಕೆಂಪೆರುವ ಮುಖದ ಕೋಪವನು ಕಂಡಿಲ್ಲವೇನು

ವಿರಸವಿಲ್ಲದಿರೆ ಸೊಗಸಿಲ್ಲ ಸುಂದರಿ
ಉಪ್ಪಿಲ್ಲದಾ ಸಾರು ಸಪ್ಪೆ ಸಪ್ಪೆ....
ಸರಸದಾ ನಡುವೆ ವಿರಸವೊಂದಿಷ್ಟಿರೆ
ಊಟದ ಜೊತೆಗಿರುವ ಉಪ್ಪಿನಕಾಯಿಯಷ್ಟೆ.

ಸಿಟ್ಟು ತಣಿಯುವ ಮೊದಲೇ
ಬಳಿ ಬರುವೆ ಅಳು ಮುಖದಿ
ಸಂತೈಸಬೇಕು ನಾನೇ ನಿನಗೆ.
ಬಯ್ದವಳು ನೀನೆ ಅಳುವವಳು ನೀನೆ.
ಮಗುವಾಗಿ ಬಿಡುವೆ ನೀನಾಗ ನನ್ನೊಡನೆ…

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?


ಚಿತ್ರಗಳು : ಶಶಿಧರ್ ಬಂಗೇರ.



ಮುಗ್ಧ ಕಂಗಳ ತೆರೆದು
ಜಗವ ದಿಟ್ಟಿಸುತಿರುವ
ಈ ಪುಟ್ಟ ಬಾಲರಿಗೂ
ಕನಸುಗಳಿವೆಯೇ ?

ಬಾಲ್ಯವೇ ಬರಡಾಗಿರುವಾಗ
ಬೃಂದಾವನವೇಲ್ಲಿಯದು
ಚಿಕ್ಕ ಪುಟ್ಟ ಆಸೆಗಳಿಗಾದರೂ 
ಆಸರೆಯಿದೆಯೇ ?

ಆಟಿಕೆಗಳ ಆಸೆಯಲ್ಲ
ಮಹಲು ಮನೆಗಳದಲ್ಲ
ಕಾಣಿಸದೇ ಆ  ಕಂಗಳ ಆಸೆ
ತಿನ್ನೋ ಹಣ್ಣುಗಳಿಗಾಗಿ...
ಗಾಜಿನೊಳಗಿನ ಆ 
ಸಿಹಿ ತಿಂಡಿಗಳಿಗಾಗಿ...

ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ  ಉಡುಪಿಗಾಗಿ.

ಮುಗಿಲೆತ್ತರಕ್ಕಿಲ್ಲ..
ಈ ಮುಗ್ಧ ಬಾಲರ ಕನಸು
ಹರಡಿಕೊಂಡಿವೆ ಇಲ್ಲೇ ಅನಾಥವಾಗಿ
ಕಾರು ಬೈಕು ಬೇಕೆಂದಲ್ಲ ಈ ಮಕ್ಕಳಾ ಕೂಗು 
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..

(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com