ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?


ಚಿತ್ರಗಳು : ಶಶಿಧರ್ ಬಂಗೇರ.ಮುಗ್ಧ ಕಂಗಳ ತೆರೆದು
ಜಗವ ದಿಟ್ಟಿಸುತಿರುವ
ಈ ಪುಟ್ಟ ಬಾಲರಿಗೂ
ಕನಸುಗಳಿವೆಯೇ ?

ಬಾಲ್ಯವೇ ಬರಡಾಗಿರುವಾಗ
ಬೃಂದಾವನವೇಲ್ಲಿಯದು
ಚಿಕ್ಕ ಪುಟ್ಟ ಆಸೆಗಳಿಗಾದರೂ 
ಆಸರೆಯಿದೆಯೇ ?

ಆಟಿಕೆಗಳ ಆಸೆಯಲ್ಲ
ಮಹಲು ಮನೆಗಳದಲ್ಲ
ಕಾಣಿಸದೇ ಆ  ಕಂಗಳ ಆಸೆ
ತಿನ್ನೋ ಹಣ್ಣುಗಳಿಗಾಗಿ...
ಗಾಜಿನೊಳಗಿನ ಆ 
ಸಿಹಿ ತಿಂಡಿಗಳಿಗಾಗಿ...

ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ  ಉಡುಪಿಗಾಗಿ.

ಮುಗಿಲೆತ್ತರಕ್ಕಿಲ್ಲ..
ಈ ಮುಗ್ಧ ಬಾಲರ ಕನಸು
ಹರಡಿಕೊಂಡಿವೆ ಇಲ್ಲೇ ಅನಾಥವಾಗಿ
ಕಾರು ಬೈಕು ಬೇಕೆಂದಲ್ಲ ಈ ಮಕ್ಕಳಾ ಕೂಗು 
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..

(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)

ಹೀಗೊಂದು ಪ್ರೀತಿಯ ಆತಿಥ್ಯ .....!! ನೆನಪುಗಳ ಬುತ್ತಿಯಿಂದ ...

ನನಗೆ ಆಗಷ್ಟೇ ಮೊದಲ ವರ್ಷದ ಡಿಗ್ರೀ ಯ ಕ್ಲಾಸ್ ಗಳು ಮುಗಿದು ರಜ ಶುರುವಾಗಿತ್ತು. ಚೆನ್ನೈ ನಲ್ಲಿರುವ ನಮ್ಮತ್ತೆಯಿಂದ ಫೋನ್ ಮೇಲೆ ಫೋನ್, ಈ ಸಲದ ರಜವನ್ನು ಚೆನ್ನೈ ನಲ್ಲಿ ಕಳೆಯಬಹುದು  ಬಾ ಎಂದು ಒಂದೇ ಸಮನೆ ಒತ್ತಾಯ. ಸರಿ ಎಂದು ನಾನು ಎರಡು ದೊಡ್ಡ ಬ್ಯಾಗ್ ಗಳ ಜೊತೆ ಚೆನ್ನೈ ತಲುಪಿಯಾಯ್ತು.  ಸೊಸೆಯಂದಿರು ಅಂದರೆ ನಮ್ಮತ್ತೆಗೆ ಪ್ರಾಣ.  ನಾನು ಹೋದ ಎರಡೇ ದಿನದಲ್ಲಿ ತಮ್ಮ ಸ್ನೇಹಿತ ಬಳಗಕ್ಕೆಲ್ಲ ' ತನ್ನ ಅಣ್ಣನ ಮಗಳು' ಎಂದು ಪರಿಚಯ ಮಾಡಿಕೊಟ್ಟಿದ್ದಾಯ್ತು. ನನಗೋ ಮಾತಿಗೆ ಮೊದಲು ನಗು , ಮಾತಿನ ನಂತರ ನಗು    ...ಸ್ವಲ್ಪ ನಗು ಜಾಸ್ತಿ. ಎಂದಿಗೂ ಹೀಗೆ ನಗುತ್ತಿರಮ್ಮ ಎಂಬ ಹಾರೈಕೆಯೂ ಹಿರಿಯರಿಂದ ಸಿಕ್ಕಿತು.ಚೆನ್ನೈ ನಲ್ಲಿರುವ ಕನ್ನಡ ಬಳಗ ಸಂಘದಲ್ಲಿ ನಮ್ಮತ್ತೆ ಹಾಗೂ ಮಾವ ಸಕ್ರಿಯ ಸದಸ್ಯರು, ನಾನು ಹೋದ ಸಮಯದಲ್ಲಿ ಮಾವ ಬಳಗದ ಸೆಕ್ರೆಟರಿ ಕೂಡ ಆಗಿದ್ದರು. ಹಾಗಾಗಿ, ಕನ್ನಡ ಬಳಗದ ಎಲ್ಲಾ ಚಟುವಟಿಕೆಗಳಲ್ಲಿ ಅತ್ತೆ ಮಾವರ ಜೊತೆ ನನಗೂ ಭಾಗವಹಿಸುವ ಅವಕಾಶ ಸಿಕ್ತು. ನಮ್ಮತ್ತೆಯ  ಸ್ನೇಹಿತರ  ಜೊತೆಗೆ ಕಳೆದ ಕೆಲ ಕ್ಷಣಗಳು, ಅವರ ಜೊತೆಗಿನ  ಒಡನಾಟ  ಕೆಲವೇ ದಿನಗಳದ್ದಾದರೂ  ಜೀವನಪೂರ್ತಿ ಮರೆಯಲಾರದಂಥ ಕೆಲವು ಅಪೂರ್ವ ಅನುಭವಗಳನ್ನಿತ್ತಿದೆ. ಅವರೆಲ್ಲರು ನನ್ನಲ್ಲಿ ತೋರಿದ ಆ ಪ್ರೀತಿ ಜೀವನಾನುಭವದ ಪುಟಗಳಲ್ಲಿ ಮಧುರತೆಯನ್ನು ತುಂಬಿದೆ.
ನನ್ನತ್ತೆ ಮನೆಯಿಂದ ಹತ್ತಿರವೇ ಇದ್ದ ಇನ್ನೊಬ್ಬ ಕನ್ನಡಿಗರು ಮೈಸೂರಿನ ನಿವೃತ್ತ ದಂಪತಿಗಳು. ನಮ್ಮತ್ತೆ ಅವರನ್ನು  ಅಂಕಲ್ ಆಂಟಿ  ಎಂದು ಕರೆಯುತ್ತಿದುದರಿಂದ ನನಗೂ ಅವರು ಅಂಕಲ್ ಆಂಟಿ ಆದರು.. ಅತ್ತೆ ಮನೆ ಹತ್ತಿರವೇ ಅವರ ಮನೆ ಇದ್ದುದರಿಂದ ದಿನಕ್ಕೊಮ್ಮೆ ಅವರ ಮನೆಗೆ ಹೋಗಿ ಬರುವುದು ಅಭ್ಯಾಸವಾಯ್ತು.ಅವರು ನಮಗೆ ತೋರುತ್ತಿದ್ದ ಪ್ರೀತಿ, ಆಪ್ಯಾಯಮಾನತೆಯನ್ನು ಇಲ್ಲಿ ಶಬ್ಧಗಳಿಂದ ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಅವರು ನಮ್ಮನ್ನು ಒಂದಿನ ಊಟಕ್ಕೆ ಕರೆದಾಗ ನಾವು ಸಂತೋಷದಿಂದ ಒಪ್ಪಿಕೊಂಡು ಅವ್ರ ಮನೆಗೆ ಊಟಕ್ಕೆ ಹೋದೆವು.
ಸ್ಟಾರ್ಟರ್ ಗೆ ಟೊಮ್ಯಾಟೊ ಸೂಪ್ ಮಾಡಿದ್ರು. ತುಂಬಾ ರುಚಿಯಾಗಿತ್ತು. " ತುಂಬಾ ರುಚಿಯಾಗಿದೆ ಆಂಟೀ ..ನಂಗೆ ಇದರ recipe ಕೊಡಿ ನಾನೂ ಮನೆಗೆ ಹೋಗಿ ಟ್ರೈ ಮಾಡ್ತೀನಿ" ಅಂದೆ. ಆವ್ರು ಖುಷಿಯಾಗಿ ಮುದ್ದಾಮ್ ಹೇಳ್ಕೊಡ್ತೀನಮ್ಮ ಅಂತ ಹೇಳ್ತಾ ನಂಗೆ ಇನ್ನೊಂದಿಷ್ಟು ಸೂಪ್ ಬಡಿಸಿಬಿಟ್ರು. ಓಹ್ ! ಸರಿ ....ಚೆನ್ನಾಗಿತ್ತಲ್ಲಾ ...ಮುಗಿಸಿದೆ.
ಸೂಪ್ ನ ನಂತರ ಮೊಸರೊಡೆ ಬೌಲ್ ತಂದು ಮುಂದಿಟ್ಟರು. " ಇದೇನು ಆಂಟಿ ನಾನು ಇದುವರೆಗೂ ತಿಂದಿಲ್ಲ" ಅಂದೆ. "ಇದು ಮೊಸರೊಡೆ ...ಚೆನ್ನಾಗಿರುತ್ತೆ ತಿನ್ನಮ್ಮ" ಅಂದ್ರು.  ರುಚಿ ನೋಡಿ ಪರವಾಗಿಲ್ಲ ಚೆನ್ನಾಗಿದೆ ಎಂದು ಮೊಸರೊಡೆ ಮುಗಿಸಿದ್ದಾಯ್ತು.ಆಮೇಲೆ ಪೂರಿ ಸಾಗು... "ಅಯ್ಯೋ! ನಂಗೆ ಹೊಟ್ಟೆ ತುಂಬೊಯ್ತು ಆಂಟಿ ..ಒಂದೇ ಪೂರಿ ಸಾಕು" ಅಂದ್ರೂ ಕೆಳದೇ ಎರಡು ಪೂರಿ ಬಡಿಸಿದ್ರು. ಅದನ್ನೂ ತಿಂದಿದ್ದಾಯ್ತು.
ಅದು ತಿಂದಾದ ಮೇಲೆ ಪುಲಾವ್ ತಂದಾಗ ನಂಗೆ ಆಗ್ಲೇ ಹೊಟ್ಟೆ ತುಂಬಿದೆ. ಪುಲಾವ್ ಬೇಡ ಅಂದೆ. "ಅದಹೇಗಾಗತ್ತಮ್ಮ, ಅನ್ನಾನೇ ತಿನ್ನದೇ ಊಟ ಹೇಗೆ ಮುಗಿಸ್ತೀಯಾ ..ಸ್ವಲ್ಪ ತಿನ್ನು" ಅನ್ನುತ್ತಾ ಬಡಿಸಿದಾಗ ಬೇರೆ ವಿಧಿ ಇಲ್ದೇ ತಿಂದೆ.
ಅದಾದ ಮೇಲೆ ಜಾಮೂನ್ ಬೌಲ್  ತಂದು ಟೇಬಲ್ ಮೇಲಿಟ್ಟಾಗ  ನಾನು ಸುಸ್ತು ...!!
" ನಂಗೆ ಎದ್ದು ಓಡಿ ಹೋಗೋಣ ಅನಸ್ತಾ ಇದೆ ಆಂಟಿ " ಅಂದೆ ನಗುತ್ತಾ ..
"ನಿಂಗೆ ಎಷ್ಟು ಸೇರುತ್ತೋ ಅಷ್ಟೇ ತಿನ್ನಮ್ಮ ..ಆದ್ರೆ ಸ್ವಲ್ಪನೂ ತಿನ್ನದೇ ಮಾತ್ರ ಏಳಬೇಡ " ಅಂದ್ರು. 
ಅಯ್ಯೋ ..ಇನ್ನು ನನ್ನತ್ರ ಸಾಧ್ಯಾನೆ ಇಲ್ಲಾ ಆಂಟಿ " ಅಂದೆ.
ಹಾಗೆ ಹೇಳಬಾರದಮ್ಮ ...ನಿಂಗೋಸ್ಕರನೇ ಮಾಡಿದ್ದು ..ಸ್ವಲ್ಪ ತಿನ್ನು ಎನ್ನುತ್ತಾ ಬಡಿಸಿದಾಗ ನಂಗೆ ಅಳು ಬರುವುದೊಂದು ಬಾಕಿ.
ಆದ್ರೂ ಅವರು ಪ್ರೀತಿಯಿಂದ ನಮಗೋಸ್ಕರವೇ ಶ್ರಮ ಪಟ್ಟು ಮಾಡಿದ್ದಾರಲ್ಲ. ಅವ್ರ ಮನಸ್ಸು ನೋಯಿಸಲಾಗದು ನನ್ನಿಂದ...ಹೇಗೋ ಸ್ವಲ್ಪ ತಿಂದೆ.
ಅಲ್ಲಿಯವರೆಗೂ ನಗುತ್ತಾ ಮಾತಾಡ್ತಾ ಕೂತಿದ್ದ ಅಂಕಲ್ ಎದ್ದು ಬಂದು ಮಾರ್ಕೆಟ್ ನಿಂದ ತಂದ ಜಿಲೇಬಿ ಎದುರಿಟ್ಟಾಗ ...ನಾನು ನಿಜಕ್ಕೂ ಗಾಬರಿ ಬಿದ್ದೆ..!!  ಅಂಕಲ್ ..ನಾನು ಇನ್ನೂ ಏನಾದ್ರೂ ತಿಂದ್ರೆ ನಂಗೆ ನಡೆದು ಹೋಗೋಕ್ಕಾಗಲ್ಲ...ಯಾರಾದ್ರೂ ಹೊತ್ತು ಹೋಗಬೇಕಷ್ಟೆ..ಅಂದರೂ ಕಿವಿಗೆ ಹಾಕಿಕೊಳ್ಳದೆ ಒಂದು ಪೀಸ್ ಕೈಯಲ್ಲೇ ತಗೊ..ಟೇಸ್ಟ್ ಕೂಡ ನೋಡದೆ ಹಾಗೆ ಬಿಡಬೇಡ ಅಂದಾಗ ನನಗೆ ಕಣ್ಣಲ್ಲಿ ನೀರು ಬಂದಿತ್ತು ಅನಸತ್ತೆ.  
ಆ ಪ್ರೀತಿಯನ್ನು ಹೇಗೆ ನಿರಾಕರಿಸೋದು ? ಒಂದೇ ಒಂದು ಸ್ಮಾಲ್ ಪೀಸ್ ತಗೊಂಡು ತಿಂದು ಕೈ ತೊಳೆಯಲು ಸಿಂಕ್ ಗೆ ಹೋದಾಗ ............................. ತಿಂದಿದ್ದೆಲ್ಲಾ ಉಲ್ಟಾ ..... :P
ನಮ್ಮತ್ತೆ ನೋಡಿ ನಗ್ತಾ ನಿಂತಿದ್ರು.. ಅಂಕಲ್ , ಆಂಟಿ ನೂ ನೋಡಿಬಿಟ್ರೆ ಅಂತ ನಂಗೆ  ಭಯ . ಬೇಗ ಬೇಗ ಸಿಂಕ್ ಎಲ್ಲಾ ಕ್ಲೀನ್ ಆಗುವಂತೆ ನೀರು ಬಿಟ್ಟೆ. ( ನನಗೆ ಮೊಸರೊಡೆ ತಿಂದ್ರೆ ಆಗೋಲ್ಲ ..ಮತ್ತೊಮ್ಮೆ ಅದನ್ನು ತಿಂದು ಉಲ್ಟಾ  ಆದ್ಮೇಲೆ ಗೊತ್ತಾದದ್ದು !! )
ಅಂತೂ ಊಟ ತುಂಬಾ ಚೆನ್ನಾಗಿತ್ತು ಅಂತ ಹೊಗಳಿ recipe ಗಳನ್ನೆಲ್ಲ ಬರೆದುಕೊಂಡು ಮನೆಗೆ ಬಂದೆವು.
ಅಂಕಲ್ , ಆಂಟಿ ಯ ಪ್ರೀತಿ ಯಾವುದೋ ಜನ್ಮಾಂತರಗಳ ಋಣವಿರಬಹುದು ಅನ್ನಿಸಿತ್ತು. ಆಮೇಲೆ ನನ್ನ ಮದುವೆಯಾಗಿ ನಾವು ಮೈಸೂರ್ ನಲ್ಲಿ ಕಲ ದಿನಗಳಿದ್ದು ನಂತರ ಡೆಲ್ಲಿ ಗೆ ಟ್ರಾನ್ಸಫರ್ ಆಗಿ ಹೋಗುವಾಗ ನಮ್ಮನ್ನು ಬೀಳ್ಕೊಡಲೆಂದು 70 ರ ಹರೆಯದ ಅವರು ರೈಲ್ವೇಸ್ಟೇಷನ್ ಗೆ ಬಂದಾಗ ಅವರ ಕಾಲಿಗೆ ನಮಸ್ಕರಿಸಿ ಅತ್ತುಬಿಟ್ಟಿದ್ದೆ. (ಅವರು ಮುಂಚಿನ ದಿನವಷ್ಟೇ ರಜಕ್ಕೆಂದು ಮೈಸೂರ್ ಗೆ ಬಂದಿದ್ದರು. )
ಇಂಥ ಅನುಭವಗಳು ಜೀವನ ದ ಹಾಗೂ ಸಮಾಜದ ಬಗೆಗಿನ ನಮ್ಮ ನಿಲುವನ್ನೆ ಬದಲಾಯಿಸಿಬಿಡುತ್ತವೆ. ಜಗತ್ತು ಎಷ್ಟು ಸುಂದರ ಎಂಬ positive feeling ನ್ನು ನಮ್ಮಲ್ಲಿ ತುಂಬುತ್ತವೆ. ಎಲ್ಲರಿಗೂ  ನಿಸ್ವಾರ್ಥ ಪ್ರೀತಿ ಹಂಚುವ ಅಂಕಲ್ ಆಂಟಿ ಯ ರೀತಿಯ ಜನ ಈ ಕಾಲದಲ್ಲೂ ಇದ್ದಾರಲ್ಲ ಎನ್ನುವ ಯೋಚನೆ  ಹಿತವೆನಿಸುತ್ತದೆ.
ಅತ್ತೆ ಮನೆಯ ಪಕ್ಕದವರಾದ ಸರೋಜ ಆಂಟಿ, ಸುಗುಣ ಆಂಟಿ, ಅತ್ತೆಯಲ್ಲಿ ಯೋಗ ಕಲಿಯಲು ಬರುತ್ತಿದ್ದ ರತ್ನ, ಅವರೆಲ್ಲಾ ಕನ್ನಡದವರಲ್ಲದಿದ್ದರೂ ನಾವು ಗಂಟೆಗಟ್ಟಳೆ ಮಾತಾಡುತ್ತಿದ್ದುದು, ಅವರು ತಮಿಳ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಾನು ಕನ್ನಡದಲ್ಲಿ ಉತ್ತರಿಸುತ್ತಿದ್ದುದು, ಅವೆಲ್ಲಾ ಮರೆಯಲಾರದ ಕ್ಷಣಗಳು ಹಾಗೂ ಮರೆಯಬಾರದ ಬಂಧಗಳು. 
ಚೆನ್ನೈ ನಲ್ಲಿ ನನ್ನ ಆತ್ಮೀಯ ಬಳಗವನ್ನು ಮತ್ತೊಮ್ಮೆ ಭೇಟಿಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅವರನ್ನೆಲ್ಲ ಭೇಟಿಯಾಗಿ ಹತ್ತು ವರ್ಷಗಳು ಕಳೆದಿದ್ದರೂ ಇಂದಿಗೂ ನನ್ನ ಕ್ಷೇಮ ವಿಚಾರಿಸುವ ಅವರ ಆತ್ಮೀಯತೆಗೆ ಕರಗಿಹೋಗಿದ್ದೇನೆ. ಚೆನ್ನೈ ಗೆ ಹೋಗಿ ಬಂದು 5 ವರ್ಷಗಳ ನಂತರ ನಡೆದ ನನ್ನ ಮದುವೆಗೆ ಅವರೆಲ್ಲಾ ಕಳುಹಿಸಿದ ರಾಶಿ ಉಡುಗೊರೆಗಳು ಅವರೆಲ್ಲರ ನೆನಪುಗಳನ್ನು ಹೊತ್ತಿರುವ ನನ್ನ ಪಾಲಿನ  ಅಮೂಲ್ಯ ಆಸ್ತಿಗಳು.
ನನ್ನ ಸ್ವಂತ ಅತ್ತೆಯನ್ನು ಭೇಟಿ ಮಾಡಿಯೇ 4 ವರ್ಷಗಳಾಯಿತು. ನಮ್ಮನ್ನೆಲ್ಲಾ ತುಂಬಾ ಪ್ರೀತಿಸುವ, ತುಂಬಾ ಹಚ್ಚಿಕೊಂಡಿರುವ ನಮ್ಮತ್ತೆ ಫೋನ್  ಮಾಡಿದಾಗಲೆಲ್ಲ ಎಮೋಷನಲ್ ಆಗಿಬಿಡುತ್ತಾರೆ.
ಜೀವನಚಕ್ರ ಉರುಳುತ್ತಿದ್ದಂತೆ , ದಾರಿಗಳು ಕವಲಾಗುತ್ತಿದ್ದಂತೆ ಭೌತಿಕವಾಗಿ ನಾವು ನಮ್ಮವರಿಂದ ಎಷ್ಟು ದೂರ ಸಾಗಬೇಕಾಗುತ್ತದಲ್ಲ. ಆದರೂ ಮನದಲ್ಲಿರುವ ಪ್ರೀತಿ ನಿಜವಾದದ್ದಾದಲ್ಲಿ ಒಬ್ಬರಿಗೊಬ್ಬರು,ಒಬ್ಬರೊಲ್ಲೊಬ್ಬರು ಸದಾ ಇದ್ದೇ ಇರುತ್ತೇವೆ.
ಈ ಸಲವಾದರೂ ಕನಿಷ್ಠ 15 ದಿನಗಳ ಮಟ್ಟಿಗೆ ಚೆನ್ನೈ ಪ್ರವಾಸದ ಮಹದಾಸೆ ಇದೆ. ಆ ಆಸೆ ಈಡೇರಲಿ ಎಂದು ಪ್ರಾರ್ಥಿಸುತ್ತಿದ್ದೇನೆ.

ಬಿಟ್ಟು ಹೋದೆಯಾ ಗೆಳೆಯಾ

ಬಿಟ್ಟು ಹೋದೆಯಾ ಗೆಳೆಯಾ ನಟ್ಟ ನಡುದಾರಿಯಲಿ
ಕತ್ತಲದು ಕವಿಯುತಿದೆ ಮನದ ತುಂಬಾ
ಮತ್ತೆ ಬೆಳಗುವುದಿಲ್ಲ ಪ್ರೇಮ ಜ್ಯೋತಿಯು ಇಲ್ಲಿ
ಆರಿಸಿದ ಕಟುಹೃದಯಿ ನೀನಾದೆಯಲ್ಲ

ಗಮ್ಯವದು ದೂರವಿದೆ, ಚೈತನ್ಯ ಅಡಗುತಿದೆ
ಹೇಗೆ ಸವೆಸಲಿ ಈ ದಾರಿಯನು  ಒಂಟಿಯಾಗಿ
ನಡುದಾರಿಯಲಿ ನಿಂತೀಗ ದಿಶೆ ತಪ್ಪಿ ಹೋಗಿದೆ.
ಪಯಣಿಸುವ ಛಲ ಕೂಡ ಕ್ಷೀಣಿಸುತಿದೆಯಲ್ಲ

ಚಂದದ ಕನಸಿನಲ್ಲಿ ಪುಟ್ಟ ಮನೆಯೊಂದಿತ್ತು
ಮುಂದೊಂದು ಹೂದೋಟ ಮೀನುಕೊಳ ಜೊತೆಗೆ.
ಪ್ರೇಮದಾ ಆ ಗೂಡಿನಲಿ ಜೋಡಿ ಹಕ್ಕಿಗಳಾಗಿ
ತನುವೆರಡು ಉಸಿರೊಂದು ಎನುವ ಹಾಡಿತ್ತು

ಆ ಪ್ರೇಮನಗರಿಯಲಿ ಪ್ರೀತಿಯಾ ಸೂರಿನಡಿ
ಹತ್ತು ಮಕ್ಕಳ ಪಡೆವ ಆಸೆ ಚೆನ್ನಿತ್ತು
ಈ ಬಾಳ ಪಯಣದ ಕೊನೆಯ ಹೆಜ್ಜೆಯವರೆಗೆ
ಜೊತೆಯಾಗೆ ನಡೆಯುವ ಭಾಷೆ ನಮದಿತ್ತು.

ಹೇಗೆ ಮರೆತೇ ಹುಡುಗಾ ನಿನ್ನದೇ ಮಾತುಗಳು
ಪ್ರತಿಧ್ವನಿಸುತಿದೆ ನನಗಿನ್ನೂ ಮನದ ತುಂಬಾ
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ

ನೂರು ಪ್ರಶ್ನೆಗಳು ಬಂದು ಮನವನ್ನು ಕಾಡುತಿವೆ
ಉತ್ತರಿಸುವ ಇಚ್ಛೆ ನಿನಗಿಲ್ಲವಲ್ಲ
ಅಚ್ಚರಿಯಾಗುತಿದೆ........
ಈತನೆನಾ ನಾ ಮೆಚ್ಚಿ ಮನಸು ಕೊಟ್ಟಿದ್ದು ?
ಎಂದಿಗೂ ನೀನೊಂದು ಪ್ರಶ್ನೆಯಾಗಿಬಿಟ್ಟೆಯಲ್ಲ

ನೀ ಕಟ್ಟಿದರಮನೆಯ ನೀನೆ ಕೊಡವಿದೆಯಲ್ಲ
ಆ ಮನಸ್ಯಾಕೆ ಕಲ್ಲಾಯ್ತೋ ನಾನರಿಯೇ ಹುಡುಗಾ
ಕನಸ ಕಂಗಳ ತುಂಬಾ ನೋವು ತುಂಬಿದೆ ಈಗ
ಚೂರಾದ ಕನಸುಗಳು ಇರಿಯುತಿವೆಯಲ್ಲ   

  ***********************

ಪ್ರೀತಿಯ ತಂಗಿಗೆ ಶುಭ ಹಾರೈಕೆ.

ನಾಳೆ ನನ್ನ  ಪ್ರೀತಿಯ ತಂಗಿಯ ಮದುವೆ . ಅವಳ ಬಾಳಿಗೊಂದು ಸಂಗಾತಿ ಬಂದು ಹೊಸ ಜೀವನ ಪ್ರಾರಂಬಿಸುವ,  ಜೀವನದಲ್ಲಿ ಒಮ್ಮೆ ಮಾತ್ರ ಬರುವಂತ ಅತಿ ಮುಖ್ಯ ದಿನ . ಆದ್ರೆ ನನಗೆ ಈ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ತುಂಬಾ ಬೇಜಾರೆನಿಸುತ್ತಿದೆ.  ನನ್ನ ಮನಸೆಲ್ಲ ಮದುವೆ ಮನೆಯಲ್ಲೇ ಇದೆ. ತಾಸಿಗೊಮ್ಮೆ ಫೋನ್ ಮಾಡಿ ಇಲ್ಲಿಂದಲೇ ಮದುವೆಯಲ್ಲಿ ಪಾಲ್ಗೊಳ್ಳುವ ಸಣ್ಣ ಪ್ರಯತ್ನಮಾಡ್ತಾ ಇದೀನಿ.

ಈಗಿನ್ನೂ ನನ್ನ ತಂಗಿಯನ್ನು (ಚಿಕ್ಕಪ್ಪನ ಮಗಳು) ಎತ್ತಿ ಮುದ್ದಾಡುತ್ತಾ ಊರೆಲ್ಲ ತಿರುಗಿಸುತ್ತಿದ್ದ ದೃಶ್ಯ ಕಣ್ ಮುಂದೆಯೇ ಇದೆ. ಒಂದೇ ಮನೆಯಲ್ಲಿ ಒಟ್ಟಾಗಿ ಬೆಳೆಯುವಾಗ ಆಡಿದ ಆಟ, ಆಟದ ನಂತರದ ಜಗಳ, ಜಗಳದ ನಂತರ ಮತ್ತೆ ಒಂದಾಗುವುದು..ಆ ದಿನಗಳು ಇನ್ನೇಂದೂ ಬರಲಾರವು ಎಂಬ ಯೋಚನೆ ನೋವು ಕೊಡುತ್ತದೆ.   ಕ್ಷಣಗಳು, ದಿನಗಳು, ವರ್ಷಗಳು ಅದೆಷ್ಟು ಬೇಗ ಜಾರಿ ಹೋಗುತ್ತಿವೆ. ವರ್ಷಗಳು ಕ್ಷಣಗಳಂತೆ ಹಾರಿ ಹೋಗುತ್ತಿವೆಯೇನೋ ಅನಿಸುತ್ತೆ ಒಮ್ಮೊಮ್ಮೆ. ಬಾಲ್ಯದ ದಿನಗಳ ನೆನಪು ಗ್ಲುಕೋಸ್ ಇದ್ದಂಗೆ. ಮನಸ್ಸಿನ ಬೇಜಾರನ್ನು ಕ್ಷಣದಲ್ಲಿ ಮಾಯಾವಾಗಿಸಿ ಮುಖದಲ್ಲಿ ನಗು ಮೂಡಿಸುತ್ತವೆ. ಆ ದಿನಗಳ ಕೆಲ ಮುದ ನೀಡುವ ವಿಷಯಗಳನ್ನ ಬರೆಯಬೇಕೆನಿಸಿದೆ.

ನಮ್ಮೂರಲ್ಲಿ ಹಾಡುಗಾರರ ಹಾವಳಿ ಸ್ವಲ್ಪ ಜಾಸ್ತಿ ಇತ್ತು. ನಮ್ಮನೆಯಲ್ಲಿ ಇನ್ನೂ ಸ್ವಲ್ಪ ಜಾಸ್ತಿ. ನಾನು ಹೈಸ್ಕೂಲ್ ಕಲಿಯುತ್ತಿದ್ದ ದಿನಗಳು. ಒಂದು ದಿನ ನಾನು ಸುಮ್ನೆ ಒಂದು ಹಾಡು ಗುನುಗುತ್ತಿದ್ದೆ (ಸ್ವಲ್ಪ ಜೋರು ಸ್ವರದಲ್ಲೇ.) 
  " ಆಕಾಶದಾಗೆ ಯಾರೋ ಮಾಯಗಾರನೋ, ಈ ಭೂಮೀ ಮಾಡಿ ಹೋಗವ್ನೆ ಏ ಏ ಏ ಏ ಏ......ಈ ಭೂಮೆ ಮ್ಯಾಗೆ ಯಾರೋ ತೋಟಗಾರನೋ, ಮಲೆನಾಡ ಮಾಡಿ ಹೋಗವ್ನೆ ಏ ಏ ಏ ಏ ಏ ... ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾ ಬಾರಾ ಆ ಆ ಆ ಆ.........      ಗೊತ್ತಾಗಿರ್ಬೇಕಲ್ಲ ಹೇಗೆ ಹಾಡಿದ್ದೆ ಅಂತ..... ಯೆಸ್,   ಹಾಗೆ   ಆ ಆ ಆ ಆ ಆಂತ ಆಲಾಪ.  ನಂಗೆ ಮುಂದೆ ಬರೋದಿಲ್ಲ ಆ  ಹಾಡು, ಅದ್ಕೆ ಅಲ್ಲಿಗೆ  ನಿಲ್ಲಿಸ್ಲೆ ಬೇಕಾಯ್ತು.  ನನ್ನ ತಂಗಿಗೆ ಹಾಡಿನ ಪಲ್ಲವಿಯೂ ಬರ್ತೀತ್ತು ಅನಸತ್ತೆ....ಸರಿ ಶುರು ಮಾಡೇ ಬಿಟ್ಲು.  ಒಂದು ಪಲ್ಲವಿ ಆಯ್ತು. ಮುಂದಿನ ಸಾಲುಗಳು ಅವ್ಳಿಗೆ ಬರೋಲ್ಲ ಈಗ ಮುಗಿಸ್ತಾಳೆ ಅಂತ ಸಮಾಧಾನ ಪಡ್ತೀರೊವಾಗ್ಲೆ ಶುರು ಮಾಡೇ ಬಿಟ್ಲು ಮುಂದಿನ ಪಲ್ಲವಿ ಕೂಡ. ಆ  ಹಾಡು ಅವ್ಳಿಗೆ ಪೂರ್ತಿ ಬರುತ್ತೆ ಅಂತ ಗೊತ್ತಾದ ಮೇಲೆ ನಾನು decide ಮಾಡಿದ್ದೆ ಆ ಹಾಡನ್ನು ಇನ್ಯಾವತ್ತೂ ಹೇಳಬಾರದು ಅಂತ. ಅವಳು ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪಕ್ಕದ ಮನೆಯ ಸುವರ್ಣತ್ತಿಗೆ ಕೂಡ ಅದೇ ಹಾಡು ಶುರು ಮಾಡಿದಾಗ ನಾನು ಸುಸ್ತು. (ನಾನು ಹಾಡುವಾಗ ಕೂಡ  ಅವರೆಲ್ಲಾ ಸಹಿಸಿಕೊಳ್ಳುತ್ತಿದ್ದರು..ಅದು ಬೇರೆ ವಿಷಯ.)
ಒಂದು ದಿನ ಎಂದೂ ಯಾರಿಗೂ ಬಯ್ಯದ ನಮ್ಮಪ್ಪ, ಮಲಗಿದ್ದವರು ಎದ್ದು ಬಂದು ಹಾಡುತ್ತಿರುವ ನನ್ನ ಇನ್ನೊಂದು ತಂಗಿಗೆ 'ನೀನೀಗ ಬಾಯಿ ಮುಚ್ಚದಿದ್ದರೆ ನಿನ್ನ ಬಾಯಿಗೆ ಗಂ ಅಂಟಿಸಿಬಿಡುತ್ತೇನೆ' ಅಂದಾಗ  ತಂಗಿಯ ಮುಖ ಹುಳ್ಳಗಾಗಿದ್ದರೂ ನಾವೆಲ್ಲಾ ಮುಸಿ ಮುಸಿ ನಕ್ಕಿದ್ದೆವು.
ಇನ್ನೊಮ್ಮೆ  ನನ್ನ ಇನ್ನೊಬ್ಬ ತಂಗಿ ತುಂಬಾ ಜೋರು ಸ್ವರದಲ್ಲಿ ಹಾಡುತ್ತಿದ್ದಳು. ತಮಾಷೆಯ ಸ್ವಭಾವದ ನನ್ನ ಚಿಕ್ಕಪ್ಪ " ನೀನು ಅಷ್ಟು ಏರು ಸ್ವರದಲ್ಲಿ ಹಾಡುತ್ತಾ ಹೋದ್ರೆ ಆಮೇಲೆ ಇಳಿಸೋಕೆ ಒದ್ದಾಡ್ತೀಯ ..ನನ್ನತ್ರ ಇಳಿಸಿಕೊಡು ಅಂತ ಕೇಳಿದ್ರೆ ನಾನಂತೂ ಇಳಿಸೋಕೆ ಸಹಾಯ ಮಾಡಲ್ಲಾ" ಅಂದಾಗ ನಮಗೆಲ್ಲ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. 
(ನನ್ನ ತಂಗಿಯರು  ಚೆನ್ನಾಗೇ ಹಾಡ್ತಾರೆ. ಆದ್ರೆ ಎಲ್ಲರೂ ಹಾಡುಗಾರರಾಗಿದ್ದಕ್ಕೆ ಸ್ವಲ್ಪ ಕಷ್ಟವಾಗಿದ್ದು..!!)
ಹೀಗೆ ಇನ್ನೆಷ್ಟೊ ಘಟನೆಗಳು. ಬರೆಯುತ್ತಾ ಹೋದರೆ ದೊಡ್ಡ ಪುಸ್ತಕವೇ ಆದೀತು. ನಮ್ಮ ಮನೆಯವರೆಲ್ಲ ಸೇರಿದಾಗ ಇದೆಲ್ಲಾ ನೆನಪಿಸಿಕೊಂಡು ತುಂಬಾ ನಗುತ್ತೇವೆ. ಆ ದಿನಗಳು ಇನ್ನೆಂದೂ ಬರಲಾರವು. ಮತ್ತೆ ಬೇಕೆಂದು ಕೇಳಿದರೆ ದುರಾಸೆಯಾದೀತು. ಆ ನೆನೆಪುಗಳೇ ಸಾಕು ಮನಸ್ಸನ್ನು ಮುದಗೊಳಿಸಲು.

ಬಾಲ್ಯದ ನೆನಪು ಮುಖದಲ್ಲಿ ಮುಗುಳ್ನಗೆ ತಂದಿದೆ. ನಾವೆಲ್ಲ ಅಕ್ಕ ತಂಗಿಯರು ಒಬ್ಬರಿಂದೊಬ್ಬರು ದೂರದಲ್ಲಿದ್ದರೂ  ಮನಸ್ಸಿನಲ್ಲಿ ತುಂಬಾ ಹತ್ತಿರದಲ್ಲಿದ್ದೆವಲ್ಲಾ ..ಅಷ್ಟು ಸಾಕು.
ಹೊಸಜೀವನದ ಹೊಸಿಲಲ್ಲಿ ನಿಂತಿರುವ  ನನ್ನ ತಂಗಿ ರಚನಾ ಗೆ  ಮದುವೆಯ ಅನುಬಂಧ ಎಂದೂ ಮಧುರ ಅನುಭೂತಿಯನ್ನು ನೀಡುತ್ತಾ ಅವಳ ವೈವಾಹಿಕ ಜೀವನ ಸದಾ ಹರುಷದಿ ಹಸಿರಾಗಿರಲಿ ಎಂದು ಮನತುಂಬಿ ಹಾರೈಸುತ್ತೇನೆ.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊಸ ಜೋಡಿಗೆ
ಜೀವನದ ತುಂಬೆಲ್ಲ ಹರುಷ ತುಂಬಿರಲಿ.....
ಸರಸ ಸಲ್ಲಾಪದ ಮಳೆ ಸುರಿಯಲಿ
ಪ್ರೇಮಾನುರಾಗಗಳು ಮನದಲ್ಲಿ ಮನೆ ಮಾಡಲಿ
ಮದುವೆಯ ಈ ಬಂಧ ಸದಾ ಸಂತೋಷದಿ ಹಸಿರಾಗಿರಲಿ.

ಸೆಳೆತ

( ಯಂಡಮೂರಿ ವೀರೇಂದ್ರನಾಥ್ ಅವರ ಒಂದು ಕಾದಂಬರಿಯಲ್ಲಿ ಬರುವ  ಸನ್ನಿವೇಷವನ್ನು ನನ್ನದೇ ರೀತಿಯಲ್ಲಿ ಕಥೆಯಾಗಿ ನಿರೂಪಿಸುವ ಒಂದು ಪ್ರಯತ್ನ.)

ಟ್ರೈನ್ ನ ಕಿಟಕಿಗೆ ತಲೆ ಆನಿಸಿ ನಿಶ್ಚಲವಾಗಿ ಕುಳಿತಿದ್ದ ನಿಖಿತಳ ದ್ರಷ್ಟಿ ವೇಗವಾಗಿ ಹಿಂದೋಡುತ್ತಿರುವ ಆ ಮರಗಳ ಮೇಲೆ ಇತ್ತು. ಅದು ಭಾವರಹಿತವಾದ  ನಿಶ್ಚಿಂತೆಯಿಂದ ಕೂಡಿದ ದೃಷ್ಟಿ . ಮನಸ್ಸಿನಲ್ಲಿ ನೀರವತೆ. ಒಂದು ದೊಡ್ಡ ಪ್ರವಾಹ ಬಂದು...ಆ ಪ್ರವಾಹ ಇಳಿದು ಹೋದ ಮೇಲೆ ಇರುವಂತಹ ಸ್ತಬ್ಧತೆ . ಅಮ್ಮ ಎಂಬ ಕೂಗಿಗೆ ಇಹಲೋಕಕ್ಕೆ ಬಂದಂತಾಗಿ ಪಕ್ಕ ತಿರುಗಿ ನೋಡಿದಳು. ನಿಖಿತ ಳ 2 ವರ್ಷದ ಮಗಳು ನಿದ್ದೆಗಣ್ಣಿನಲ್ಲೇ ಅಮ್ಮನನ್ನು ಕರೆಯುತ್ತಿದ್ದಳು. ಅವಳ ತಲೆ ಸವರಿ ಮತ್ತೆ ಮಲಗಿಸಿ, ಹಾಗೇ ಹೊರಗೆ ನೋಡುತ್ತಾ ಕುಳಿತಳು.  ಬೇಡವೆಂದು ಓಡಿಸಿದ್ದ ಆ ಯೋಚನೆಗಳು ಮತ್ತೆ ಮನದೊಳಗೆ ಸುಳಿಯಲಾರಂಬಿಸಿದವು.         ' ಎಷ್ಟು ಸುಂದರ ಸಂಸಾರ ತನ್ನದು. ಮುತ್ತಿನಂತ ಇಬ್ಬರು ಮಕ್ಕಳು. ಒಳ್ಳೆ ಉದ್ಯೋಗದಲ್ಲಿದ್ದು ಚೆನ್ನಾಗಿ ಸಂಪಾದನೆ ಮಾಡುತ್ತಿರುವ ಗಂಡ, ಸ್ವಲ್ಪ ಜಾಸ್ತಿ practical ಆದರೂ ಕೂಡ...ಅವಶ್ಯಕತೆಗನುಗುಣವಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ದಾಂಪತ್ಯ ಜೀವನ ಚೆನ್ನಾಗೆ ಇತ್ತಲ್ಲ.. ಅದ್ಯಾಕೆ ಹೀಗಾಯ್ತು ತನಗೆ....? ಎಂದೂ ತನ್ನ ಮನಸ್ಸನ್ನ ಬೇಕಾಬಿಟ್ಟಿ ಹರಿಯಬಿಟ್ಟವಳಲ್ಲ ತಾನು.  ಸಮಂಜಸವೆನಿಸಿದ ವಿಷಯದಲ್ಲಷ್ಟೇ ಮನಸ್ಸು ಹರಿಸಿದವಳು . ಈಗ್ಯಾಕೆ ಹೀಗಾಯ್ತು... ? ಕಾಲೇಜ್ ನಲ್ಲೇ ಕೆಲವು ಹುಡುಗರು ನಿನ್ನನ್ನು ಪ್ರೀತಿಸುತ್ತೇನೆಂದು ಪ್ರೇಮ ಪತ್ರ ತಂದು ಕೈಗಿತ್ತಾಗಲೂ ಯಾರ ಮೇಲೆಯೂ ನನಗೆ ಆಕರ್ಷಣೆ ಮೂಡಿರಲಿಲ್ಲ. ಅಪ್ಪ ಅಮ್ಮ ತೋರಿಸಿದ ಹುಡುಗನನ್ನೇ ಮದುವೆಯಾಗಿ ಇಬ್ಬರು ಮುತ್ತಿನಂಥ ಮಕ್ಕಳಾಗಿ ನೆಮ್ಮದಿಯ ಜೀವನ ನಡೆಸುತ್ತಿರುವಾಗ  ಬಿರುಗಾಳಿಯಂಥ ಭಾವನೆಗಳ್ಯಾಕೆ ಶುರುವಾಯ್ತು.


ಇದೆಲ್ಲಾ ಶುರುವಾಗಿದ್ದು ಈಗ 4 ತಿಂಗಳುಗಳ ಹಿಂದೆ. ನನ್ನ ಗಂಡನ ಮನೆಯ ಪರಿಚಯದ ಹುಡುಗ ನನ್ನ ಗಂಡನ ಕಂಪನಿ ಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ. ನಮ್ಮ ಅಪಾರ್ಟ್ಮೆಂಟ್ ನಲ್ಲೇ ಪಕ್ಕದ ಫ್ಲಾಟ್ ಖಾಲಿ ಇದ್ದುದರಿಂದ ಅಲ್ಲೇ ಆತನ ವಾಸ್ತವ್ಯ ಶುರುವಾಯ್ತು. ಶುರುವಿನಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತ ಮತ್ತು ನನ್ನ ಗಂಡ ಒಟ್ಟಿಗೆ ಕೆಲಸಕ್ಕೆ ಹೋಗುವುದು ಬರುವುದು ವಾಡಿಕೆಯಾಯ್ತು. ಹಾಗೆ ಆತನಿನ್ನೂ ಅವಿವಾಹಕ ನಾದ್ದರಿಂದ ಆಗಾಗೆ ಊಟಕ್ಕೆ ಕರೆಯೋದು , weekend ಗಳಲ್ಲಿ ಒಟ್ಟಾಗಿಯೇ ಹೊರಗೆ ಸುತ್ತಲು ಹೋಗುವುದು..ಅದೆಲ್ಲವೂ ಚೆನ್ನಾಗೇ ಇತ್ತಲ್ಲ .... ಆದರೆ ಯಾವುದೋ ಒಂದು ಒಳ್ಳೆಯದಲ್ಲದ ಗಳಿಗೆಯಲ್ಲಿ ನನಗೇ ಅರಿವಿಲ್ಲದಂತೆ  ಆತನ ಬಗ್ಗೆ ನನಗಿರುವ ಮೆಚ್ಚುಗೆಯ ಭಾವನೆ ಬೇರೆ ರೂಪ ಪಡೆದುಕೊಳ್ಳುತ್ತಿತ್ತು. ಆತ ನನ್ನ ಗಂಡನಿಗಿಂತ ಸುಂದರನೆನಲ್ಲ. ಆದರೆ ಅಪರೂಪದ ವ್ಯಕ್ತಿತ್ವವಿರುವಂಥ ವ್ಯಕ್ತಿ. ಆತನ ಆ ಸಹನಶೀಲತೆ ,  ಸ್ನೇಹಪರತೆ, ಉದಾರತನ, ಎಲ್ಲಕ್ಕಿಂತ ಹೆಚ್ಚಾಗಿ ಆತನಲ್ಲಿನ ಆ ನೈಜತೆ ...ನಂಗೆ ಅವನ ಬಗ್ಗೆ ತುಂಬಾ ಮೆಚ್ಚುಗೆ ಮೂಡಲು ಕಾರಣ. ಆದರೆ ಆ ಮೆಚ್ಚುಗೆಯ ಭಾವನೆ ಒಲವಾಗಿ ಬದಲಾದದ್ದು  ಯಾವಾಗ ಅಂತಲೇ ತಿಳಿಯಲಿಲ್ಲವಲ್ಲ. ಬಹುಶ : ಸ್ತ್ರೀಯರ ಮೇಲೆ ಆತನಿಗಿರುವ ಉನ್ನತ ಗೌರವ , ಕಾಳಜಿಗಳಾ ನನ್ನ ಮನಸ್ಸನ್ನು ಬಲಹೀನವನ್ನಾಗಿ ಮಾಡಿದ್ದು..ಅಥವಾ ಆ ವಾಕ್ಚಾತುರ್ಯವಾ...? ಏನೋ ಗೊತ್ತಾಗಲೇ ಇಲ್ಲ .....ಮದುವೆಗೆ ಮುಂಚೆ ಈ ತರದ ಭಾವನೆಗಳು ಮೂಡಿದ್ದರೆ.....ಅದು ಸುಂದರ ಕಾವ್ಯವಾಗಬಹುದಿತ್ತು .....!!        ಆದರೆ ಈಗ ಮೂಡಿರುವುದು ದುರಂತಕ್ಕೆ ಮುನ್ನುಡಿಯಂತಲ್ಲವೇ ..?   ತಿಂಗಳುಗಳ ಕಾಲ ಆತನ ಬಗ್ಗೆ ನನಗೆ ಮೂಡುತ್ತಿರುವ ಭಾವನೆಗಳನ್ನು ಹೊಡೆದೋಡಿಸಲು ಒದ್ದಾಡಿಬಿಟ್ಟಿದ್ದೆ. ರಾತ್ರಿ ಮಲಗಿದರೂ ನಿದ್ದೆಯ ಬದಲು ಆತನ ಯೋಚನೆಗಳೆ ಬರುತ್ತಿತ್ತಲ್ಲ. ದು:ಖಿತ ಮನಸ್ಸನ್ನು ಶಾಂತಗೊಳಿಸಲಾರದೇ ಸರಿ ತಪ್ಪುಗಳ ತುಲನೆಯಲ್ಲೇ ಬೆಳಗು ಹರಿಸುತ್ತಿದ್ದೆ.  ಗಂಡನ ಪಕ್ಕದಲ್ಲಿ ಮಲಗಿ ಬೇರೋಬ್ಬಾತನ ಬಗೆಗೆ ಯೋಚಿಸುತಿದ್ದ ನನ್ನ ಮನಸ್ಸನ್ನು ಹಿಡಿತದಲ್ಲಿಡಲಾಗದೆ ನನ್ನ ವಿವೇಚನೆ, ನೈತಿಕ ಮೌಲ್ಯಗಳೆಲ್ಲ ಮನದ ಮೂಲೆಗೆ ಸೇರಿಬಿಟ್ಟಿದ್ದವಲ್ಲ.  ಬೇಡ ಹೋಗೆಂದು ಮನದ ಹೊರ ಹಾಕಿ ಕದ ಮುಚ್ಚಿದರೂ ನುಗ್ಗಿ ಬರುವ ಆತನ ನೆನಪು ನನ್ನನ್ನು ತುಂಬಾ  ಕೆಳಗಿಳಿಸಿಬಿಟ್ಟಿತ್ತು.  ಬೇರೆಯವರಲ್ಲಿ ಹೇಳಿಕೊಳ್ಳಲಾರದಂಥ , ನನಗೆ ನಾನೇ ಸಹ್ಯವಾಗದಿರುವಂತ  ಆ ಯಾತನೆಗೆ ಸಿಕ್ಕಿ ನರಳಾಡಿಬಿಟ್ಟೆ.  ಅಷ್ಟರಲ್ಲೇ, ತುಂಬಾ ಸೂಕ್ಷ್ಮಮತಿಯಾದ ಆತ, ನನ್ನ ಮನಸ್ಸಿನಲ್ಲಿನ ಭಾವನೆಗಳನ್ನು ಓದಿಬಿಟ್ಟಿರಬಹುದಾ...ಅನ್ನಿಸಿತ್ತಲ್ಲ.   ಹಾಗೇನಾದರೂ ಆಗಿ, ಅವನಲ್ಲಿ ನಾನು ಗೊಂದಲ ಮೂಡಿಸಿದ್ದರೆ .....ಶುಭ್ರ ಶಾಂತ ಕೊಳದಲ್ಲಿ ಕಲ್ಲೆಸೆದು ಹುಚ್ಚು ಅಲೆಗಳನ್ನೆಬ್ಬಿಸಿದಂತೆ !.  ಆ ಪಾಪವನ್ನೂ ನಾನು ಮಾಡಿಬಿಟ್ಟೆನಾ ಎಂದು ನೋವು ಪಟ್ಟಿದ್ದೆ.   ಹಾಗೇನಾದರೂ ಆಗಿದ್ದಲ್ಲಿ  ಆ ಸ್ನೇಹವೂ ಕಡಿದುಹೋಗುವುದಲ್ಲಾ...ಎಂದು ಕೊರಗಿದ್ದೆ.


ಅಷ್ಟರಲ್ಲೇ, ನನ್ನ ಮಾನಸಿಕ ನರಳಾಟ ನೋಡಲಾರದೇ ದೇವರೇ ಕಳುಹಿಸಿ ಕೊಟ್ಟಂತೆ ಬಂದಿತ್ತು ಆ interview letter. ನನ್ನ ಗಂಡನಿಗೆ ಇನ್ನೊಂದು ಕಂಪನಿಯಲ್ಲಿ ಒಳ್ಳೆಯ ಹುದ್ದೆಗೆ ಇಂಟರ್ವ್ಯೂ ಬಂದಾಗ ನನಗೊಂದು ಜೀವ ಸೆಲೆ ಸಿಕ್ಕಷ್ಟೂ ಸಂತೋಷವಾಗಿತ್ತು.  ಆದರೆ ಪ್ರಸ್ತುತ ಕಂಪನಿ ಯಲ್ಲಿ career growth ಚೆನ್ನಾಗಿದೆ ಎಂಬ ಕಾರಣಕ್ಕೆ ನನ್ನ ಗಂಡ ಬೇರೆ ಕಂಪನಿ ಸೇರಲು ಸಿದ್ದನಿರಲಿಲ್ಲ. ಆಗ ನಾನು ನಡೆದುಕೊಂಡ ರೀತಿ  ನನ್ನ ಗಂಡನಿಗೆ ವಿಚಿತ್ರವೆನಿಸಿರಬೇಕು. ನಾನು ಬೇರೆ ಕಂಪನಿ ಸೇರಲೇಬೇಕೆಂದು ಹಠ ಹಿಡಿದಿದ್ದೆ. ಅತ್ತು ಕರೆದು ರಂಪ ಮಾಡಿದ್ದೆ.  ಬೇರೆ ಕಂಪನಿ ಸೇರದಿದ್ದಲ್ಲಿ ನನ್ನ ಜೊತೆಗೆಂದೂ ಮಾತನಾಡಬೇಡಿ ಎಂದು ಜಗಳವಾಡಿದ್ದೆ.


ಅಂತೂ ನನ್ನ ಒತ್ತಾಯಕ್ಕೆ ಮಣಿದು ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಯಾಯ್ತು. ನನ್ನ ಮನಸ್ಸು ತುಂಬಾ ನಿರಾಳವಾಗಿತ್ತು. ಅದಲ್ಲದೆ ಮನಸ್ಸಿನ ಹತೋಟಿಗೆ ಪ್ರಯತ್ನಿಸುತ್ತಾ ಒಳ್ಳೆಯ ಪುಸ್ತಕಗಳ ಮೊರೆ ಹೋಗಿದ್ದೆ. ದೇವರ ಧ್ಯಾನವನ್ನು ಹೆಚ್ಚಿಸಿದ್ದೆ. ಅಂತೂ ಹೇಗೋ ಮೋಹದ ಮಾಯೆಯ ಸುಳಿಯಲ್ಲಿ ಸಿಕ್ಕಿಬಿದ್ದ ಮನಸ್ಸನ್ನು ಆ ಬಲೆಯಿಂದ ಹೊರಗೆಳೆದು ತಂದಿದ್ದೆ.  ಮೂರ್ಖ ಮನಸ್ಸಿಗೆ ಬುದ್ದಿಹೇಳಿದ್ದೆ.   ಈಗ ಆ  ಊರನ್ನು ಬಿಟ್ಟು ದೂರದೂರಿಗೆ ಹೋಗುತ್ತಿದ್ದೇವೆ.     ನಾಳೆಯಿಂದ ಹೊಸ ಊರು, ಹೊಸ ಮನೆ, ಹೊಸ ಗಾಳಿ, ಹೊಸ ಬೆಳಕು.  ಹೊಸ ಜೀವನವನ್ನು ಪ್ರಾರಂಭಿಸುವ ಉತ್ಸಾಹವಿದೆ.  ಬಿರುಗಾಳಿಯ ರಭಸಕ್ಕೆ ಸಿಕ್ಕಿ ಮುದುಡಿ ಹೋದ ಮೊಗ್ಗನ್ನು ..ಮತ್ತೆ ನೀರೆರೆದು ಹೂವಾಗಿಸಿ ನಗಿಸುವ ಆಸೆಯಿದೆ.  ಎಲ್ಲವನ್ನೂ ಶುರುವಿನಿಂದ ಶುರು ಮಾಡಬೇಕೆನಿಸಿದೆ.


ಎಲ್ಲರ ಜೀವನದಲ್ಲಿಯೂ ಇಂಥದೊಂದು ದುರ್ಬಲ ಕ್ಷಣ ಬರುತ್ತಾ...? ಅಥವಾ ನನ್ನ ಮನಸ್ಸೋಂದೇ ಈ ತರದ ಹುಚ್ಚು ಕುದುರೆಯಾಗಿದ್ದಾ..? ಎಂಬ ಯೋಚನೆ  ಕಾಡುತ್ತಿದೆ ಈಗ..!


ಮನಸ್ಸನ್ನು ನಿರಾಳವಾಗಿಸಿಕೊಂಡು...ಕೆಲವೊಮ್ಮೆ ಅದಾಡುವ ಹುಚ್ಚಾಟದ ಬಗ್ಗೆ ನಗುವಷ್ಟರ ಮಟ್ಟಿಗೆ ಬೆಳೆದಿದ್ದೇನೆ ..! '


" ನಿಖಿತಾ ......ಊರು ತಲುಪಿಯಾಯ್ತು ಎದ್ದೇಳು.." ಎಂಬ ಮಾತುಗಳಿಗೆ ಕಣ್ ತೆರೆದವಳು.....ಮುಂದೆ ನಿಂತಿದ್ದ ಗಂಡ ಮಕ್ಕಳೆಡೆಗೆ  ತುಂಬು ಮನಸಿನಿಂದ ಆತ್ಮೀಯವಾಗಿ  ನಕ್ಕಾಗ....ಆ ನಗುವಿನರ್ಥ ಅವಳಿಗಷ್ಟೆ ತಿಳಿದಿತ್ತು.
-----ಇದು ಕಾಲ್ಪನಿಕ ಕಥೆ

ತಬ್ಬಲಿಯು ನೀನಾದೆ ಮಗುವೇ ..!!!

"ತಬ್ಬಲಿಯು ನೀನಾದೆ ಮಗನೆ,
ಹೆಬ್ಬುಲಿಯ ಬಾಯನ್ನು ಸೇರುವೆ,
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ.."
ನಾನು ಚಿಕ್ಕವಳಿರುವಾಗ ನನ್ನಮ್ಮ ಪ್ರತಿದಿನ  ರಾತ್ರಿ  ಪುಣ್ಯಕೋಟಿಯ ಕಥೆ ಹೇಳುತ್ತಿದ್ದರು. ದಿನವೂ ಆ ಗೋಮಾತೆಯ ದು:ಖ ಕ್ಕೆ ನಾನೂ ಅಳುತ್ತಿದ್ದೆ. ಆ ಕರುವಿಗೆ ಇನ್ನು ಅಮ್ಮನಿರುವಿದಿಲ್ಲವಲ್ಲ ಎಂದು ದು:ಖಿಸುತ್ತಿದ್ದೆ...
ಅದು ಇಪ್ಪತ್ತು ವರ್ಷಗಳ ಹಿಂದೆ ...
ಇಂದೂ ಅಳುತ್ತಿದ್ದೇನೆ...ಅದೇ ವೇದನೆಯನ್ನು, ಅದರಾಳವನ್ನು ಅನುಭವಿಸಿ ಅಳುತ್ತಿದ್ದೇನೆ.. ಅಂದು ಅದು ಕಥೆಯೆಂದು ತಿಳಿಯದೆ ಅಳುತ್ತಿದ್ದೆ...ಇಂದು ಇದು ಕಥೆಯಲ್ಲವೆಂಬುದು ಅರಿವಾಗಿ ಅಳುತ್ತಿದ್ದೇನೆ..
ಆ ಗೋವಿಗಾದ ನೋವು ಹೇಗಿತ್ತೆಂದು  ನನಗೂ  ಅರ್ಥ ಮಾಡಿಸುವ ಆಸೆ  ವಿಧಿಗ್ಯಾಕೆ ಬಂತು ..?
ನನಗಿನ್ನು ನಾಳೆಗಳಿಲ್ಲ..ನನ್ನ ಮಗುವಿಗಿನ್ನು ಅಮ್ಮನಿರುವುದಿಲ್ಲ ..ನನ್ನ ಕರುಳ ಕುಡಿ ಅಮ್ಮನಿಲ್ಲದ ತಬ್ಬಲಿ...ಅದೆಷ್ಟು ಯಾತನೆ  ಕೊಡುವಂಥ ಯೋಚನೆ ಅದು. ..ಆದರದೇ ನಿಜವಾಗುತ್ತಿದೆಯಲ್ಲ...
ಮೇಲಿರುವ   ಸೂತ್ರದಾರಿಗೆ ಯಾಕಿಷ್ಟು ಬೇಗ ನನ್ನೀ ಪಾತ್ರದ ಮೇಲೆ ಬೇಸರ ಬಂತು...? ನನ್ನೀ ಹಸುಗೂಸನ್ನು ಬಿಟ್ಟು ನಾ ಹೇಗೆ ತೊರೆಯಲಿ ಈ  ಜಗವನ್ನು...ಇನ್ನೂ ಜಗತ್ತನ್ನರಿಯದ ಹಸುಳೆ ನನ ಕಂದ..ಅಮ್ಮನ ಬಿಟ್ಟು ಒಂದು ದಿನವೂ ಇರಲಾರ ನನ ಕಂದ ..ಇನ್ನು ಶಾಶ್ವತವಾಗಿ ಅಮ್ಮನಿಲ್ಲದ ಮಗುವಾಗುವುದೆಂಬ ಸತ್ಯವನ್ನು ಹೇಗೆ ನಂಬಲಿ ನಾನೀಗ ?  ....ಯಾರೆಷ್ಟೇ ಮುದ್ದಿಸಿದರೂ ಅಮ್ಮನ ಮಮತೆಯನ್ನು ನನ ಕಂದನಿಗೆ  ಯಾರು ಕೊಡಬಲ್ಲರು...ನಿಜ ...ನನ್ನ ಪತಿ  ನನ್ನ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದು ..ಆದರೆ ಅವರ ಮುಂಗೋಪ ನನ ಕಂದನಿಗೆ ಹಿಂಸೆಯಾಗಬಹುದಲ್ಲ.
ಬೇರೆ ಯಾರಿಗಾದ್ರೂ  ಕಷ್ಟ ಬಂದಾಗ ಅಯ್ಯೋ ಪಾಪ ಅಂದುಕೊಳ್ಳುತ್ತಿದ್ದೆನಲ್ಲ...ಆದರೆ ಅವರಿಗಾಗುವ ನೋವಿನ ಆಗಾಧತೆಯ ಅರಿವಿರಲೇ ಇಲ್ಲ ಆಗ.. ಈಗ ಅರಿವಾಗುತ್ತಿದೆ ಕಷ್ಟದೊಳಗಿನ ಯಾತನೆಯ ಆಳ.... ಆ ನೋವಿನ ಆಳವನ್ನು ಈಗ ಅಳೆಯುತ್ತಿದ್ದೇನೆ...ಅದೇ  ಆಳದಲ್ಲಿ ಇಳಿಯುತ್ತಿದ್ದೇನೆ...ಇಳಿದು ಇಳಿದು ಅಸ್ತವಾಗುತ್ತಿದ್ದೇನೆ..
ನಾನು ಅಸ್ತಿಯಾದರೆ ಯಾರಿಗೇನೂ ತುಂಬಾ ನಷ್ಟವೇನಿಲ್ಲ.. ತುಂಬಲಾರದ ಅಸ್ತಿಥ್ವವೇನಲ್ಲ ನನ್ನದು..
ಆದರೆ ನನ್ನಮ್ಮನಿಗೆ , ನನ್ನ ಕಂದಮ್ಮನಿಗೆ ಮಾತ್ರ ತುಂಬಲಾರದ ನಷ್ಟವೇ ಅಲ್ಲವೇ ....
ದೇವರೇ ....ನಾನೇನು ಮಾಡಲಿ ಈಗ.. ? ಇನ್ನೈದು ವರ್ಷ ನನ್ನ ಆಯಸ್ಸನ್ನು ಹೆಚ್ಚಿಸಲಾರೆಯಾ ..ನನಗೊಸ್ಕರವಲ್ಲ ...ಅಣು ಅಣುವನ್ನೂ ತಿನ್ನುತ್ತಿರುವ ಈ ಕ್ಯಾನ್ಸರನೊಡನೆ  ಬಾಳಿ  ನಾನೇನೂ ಸಾಧಿಸಲಾಗುವುದಿಲ್ಲ ನಿಜ  !! ಆದರೆ ನನ್ನ ಹಸುಕೂಸಿಗೆ ಅಮ್ಮ ಬೇಕಲ್ಲ ..  ಬಾಲ್ಯ ಕಳೆಯುವ ತನಕ ಅಮ್ಮನ ವಾತ್ಸಲ್ಯ ಬೇಕಲ್ಲ ….
ನಾನು ಸಾಯುತ್ತಿರುವುದಕ್ಕಲ್ಲ ನನಗೀ ಸಂಕಟ. ನನ್ನ ಮಗುವನ್ನು ತಬ್ಬಲಿಯನ್ನಾಗಿ ಮಾಡುತ್ತಿರುವುದಕ್ಕೆ...ನಾನಿಲ್ಲದೆ ನನ್ನ ಮಗಳು ಪಡಬಹುದಾದ ಸಂಕಷ್ಟಗಳ ಬಗ್ಗೆ...ನನ್ನ ನೋವು.
ಎಲ್ಲ ರೋಗಗಳಿಗೂ ಮದ್ದು ಹುಡುಕಿರುವ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆಯಾಕೆ ಸೋಲೋಪ್ಪಿಕೊಳ್ಳುತ್ತಿದ್ದಾರೆ?
ಅಥವಾ ಇದೆಲ್ಲ ಆ ದೇವರ ನಾಟಕದ ತಿರುವುಗಳೇ? ...ಅಥವಾ ಆ ವಿಧಿಯ ಆಟವೇ?
ಹ್ಮ: ...ನನ್ನ ಹಣೆಬರಹಕ್ಕೆ ಯಾರನ್ಯಾಕೆ ದೂಷಿಸಲಿ ನಾನು....ಯಾವುದೋ ಜನ್ಮದಲ್ಲಿ ಅಮ್ಮ ಮಗುವನ್ನು ಅಗಲಿಸುವ ಪಾಪವೆಸಗಿದ್ದೇನೋ  ಏನೋ ...ಅದರ ಫಲವಿರಬಹುದು...
ವಿಧಿಯಾಟವನ್ನು ವಿರೋಧಿಸಲು  ನಾನ್ಯಾರು? ..ಇಲ್ಲ ..ಹಾಗಲ್ಲ..ವಿಧಿಯನ್ನು ವಿರೋಧಿಸಲು ಸಾಧ್ಯವೇ ಇಲ್ಲ ...ಹಾಗೊಮ್ಮೆ ವಿರೋಧಿಸಲು ಸಾಧ್ಯವಿದ್ದಲ್ಲಿ ಜಗತ್ತು ಹೀಗಿರುತ್ತಿರಲಿಲ್ಲವಲ್ಲ ........
ಈಗ ನಾನು ಮಾಡಲು ಸಾಧ್ಯವಿರುವುದೊಂದೇ..ಆ ಪುಣ್ಯಕೋಟಿ ಯಂತೆ ಬೇಡಿಕೊಳ್ಳುವುದು ......
"ಅಮ್ಮಗಳಿರಾ ಅಕ್ಕಗಳಿರಾ..
ಎನ್ನ ತಾಯ್ ಒಡ ಹುಟ್ಟುಗಳಿರಾ..
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯ ನೀ ಮಗುವನು..


ಕೋಪ ಬಂದರೆ  ಹೊಡೆಯಬೇಡಿ ,
ಸಹನೆ ಕಳೆದು ಬಯ್ಯಬೇಡಿ ,
ಅಮ್ಮನಿಲ್ಲದ ಕಂದ ನನ ಮಗು,
ತಬ್ಬಲಿಯ ನೀ ಶಿಶುವನೂ  ..........."


ಓದಿ ಮುಗಿಸಿದ ವಾಣಿಯ ಕಣ್ಣುಗಳು ಕೊಳವಾಗಿ ಹರಿಯುತ್ತಿತ್ತು. ಮನಸಲ್ಲಿ ಭರಿಸಲಾರದಂಥ  ಯಾತನೆ. ಕಂಠ ಕಟ್ಟಿಕೊಂಡು ಅಳು ಉಕ್ಕಿಬರುತ್ತಿತ್ತು. ಅದ್ಹೇಗೋ ಸಾವರಿಸಿಕೊಂಡು, ಆ ಡೈರಿಯನ್ನು ಅಲ್ಲೇ ಮುಚ್ಚಿಟ್ಟು ಒಂದರೆಗಳಿಗೆ ಅಲ್ಲೇ ಕುಳಿತಳು. ಸುಮನಾಳ ಆ ಬರಹ ಅವಳ ಯಾತನೆಗೆ ಕನ್ನಡಿ ಹಿಡಿದಂತಿತ್ತು.  ಅತ್ತು ಅತ್ತು ಸುಸ್ತಾಗಿ ಮಲಗಿದ ಅಮೂಲ್ಯಳನ್ನೊಮ್ಮೆ ಕರುಣಾಪೂರಿತವಾಗಿ ನೋಡಿ  ರೂಮಿನಿಂದ ಹೊರಬಂದವಳೇ, ಶಾರದಮ್ಮನಿಗೆ ಮನೆಗೆ ಹೋಗುತ್ತಿರುವುದಾಗಿ ತಿಳಿಸಿ ಮನೆಕಡೆ ಹೆಜ್ಜೆ ಹಾಕಿದಳು.  ದಾರಿಯಲ್ಲಿ ಸಾಗುತ್ತಿರುವ ವಾಣಿಯ ಮನಸ್ಸು 2 ವರ್ಷ ಹಿಂದಕ್ಕೋಡಿತ್ತು.


                                               *                      *                        *
                                                              part 2
ಶಾರದಮ್ಮನ ಅಣ್ಣನ ಮಗಳು ವಾಣಿ.  ಶಾರದಮ್ಮನ ಮನೆಯಿಂದ ನಾಲ್ಕನೇ ಮನೆಯೇ ವಾಣಿಯ ಮನೆ. ಶಾರದಮ್ಮನ ಸೊಸೆ ಸುಮನಾ.   ವಾಣಿ ಮತ್ತು ಸುಮನಾ ಇಬ್ಬರಲ್ಲೂ ಸಂಬಂಧಕ್ಕಿಂತ ಹೆಚ್ಚಾಗಿ ಸ್ನೇಹ ಮೂಡಿತ್ತು. ಇಬ್ಬರದೂ ಒಂದೇ ರೀತಿಯ ಸ್ವಭಾವವಾದ್ದರಿಂದ ಆಪ್ತ ಗೆಳತಿಯರಾಗಿಬಿಟ್ಟಿದ್ದರು. ಇಬ್ಬರಿಗೂ ಒಂದೇ ವಯಸ್ಸಿನ ಮಕ್ಕಳು. ವಾಣಿಯ ಮಗ ಸುಹಾಸ್ ಹಾಗೂ ಸುಮನಾಳ  ಮಗಳು ಅಮೂಲ್ಯ ಇಬ್ಬರಿಗೂ ಆಗಿನ್ನೂ 1  ವರ್ಷ.
ಒಂದಿನ ಮಾರ್ಕೆಟ್ ಗೆ ಹೋಗುವಾಗ ಸುಮನಾ ತುಂಬಾ ಬೇಜಾರಿನಿಂದಿರುವಂತೆ ಅನಿಸಿತು ವಾಣಿಗೆ. ಅದನ್ನೇ ಕೇಳಿದಳು. ಆದರೆ ತನ್ನ ಬೇಜಾರನ್ನು ಬೇರೆಯವರಲ್ಲಿ ಹೆಚ್ಚಾಗಿ ಹಂಚಿಕೊಳ್ಳದ ಸುಮನಾ   ' ಏನಿಲ್ಲ ಬಿಡು ವಾಣಿ, ಸ್ವಲ್ಪ ತಲೆನೋಯುತ್ತಾ ಇದೆ ಅಷ್ಟೆ ' ಎಂದು ಹಾರಿಕೆಯ ಉತ್ತರ ಕೊಟ್ಟಳು  .
ಆದರೆ ವಾಣಿ ಬಿಡಲ್ಲಿಲ್ಲ..'ಯಾಕೆ ನನ್ನಲ್ಲೂ ಹೇಳುತ್ತಿಲ್ಲ ಸುಮನಾ ನೀನು. ನಂಗೊತ್ತಿದೆ ಏನೋ ವಿಷಯ ಇದೆ. ಆದರೆ ನೀನು ನನ್ನಿಂದ ಮುಚ್ಚಿಡ್ತಾ ಇದೀಯಾ.'
'ಏನಿಲ್ಲ ಬಿಡು ವಾಣಿ '
ನನಗೆ ಗೊತ್ತು ಸುಮನಾ ...ಮೊನ್ನೆ ನಾನು ನಿಮ್ಮ ಮನೆಗೆ ಬಂದಾಗ ನೀನು ಅಳುತ್ತ  ಏನೋ ಹೇಳುತ್ತಿದ್ದೆ...'ನನಗೆ ಹೊಡೆದುಬಿಟ್ರಲ್ಲ ಅತ್ತೆ' ಎನ್ನುತ್ತಾ ಅಳುತ್ತ ಹೋಗಿದ್ದು ಕೇಳಿತು. ಶಾರದತ್ತೆ ನಿನಗೆ ಹೊಡೆದರಾ ಎಂದು ಶಾಕ್ ಆಯ್ತು. ಆಮೇಲೆ ನಾನು ಒಳಗಡೆ ಬರಲೇ ಇಲ್ಲ ...ಹಾಗೆ ವಾಪಸ್ ಬಂದುಬಿಟ್ಟೆ. ಆಮೇಲೆ ನಿನ್ನಲ್ಲಿ ಕೇಳೋಣ ಅಂದುಕೊಂಡಿದ್ದೆ. ವಾಣಿ ಹಾಗೆ ಕೇಳಿದಾಗ ಸುಮನಾಗೆ ಅದುಮಿಟ್ಟ ನೋವೆಲ್ಲ ಹೊರ ಉಕ್ಕಿ ಬಂದಂತಾಯ್ತು.
ವಾಣಿ ತುಂಬಾ ಒತ್ತಾಯಿಸಿದ ಮೇಲೆ ಸುಮನಾ ಹೇಳತೊಡಗಿದಳು. " ಏನಿಲ್ಲ ವಾಣಿ, ಹೇಳಲು ಹೋದರೆ ಇವೆಲ್ಲ ತುಂಬಾ ಚಿಕ್ಕ ವಿಷಯಗಳು.  ಆದರೂ ಕೆಲವೊಮ್ಮೆ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತವೆ.  ಸಚಿನ್ ನ ಕೀಟಲೆಗಳು ಇತ್ತೀಚೆಗೆ ತುಂಬಾ ಜಾಸ್ತಿ ಆಗಿದೆ ವಾಣಿ. ಅಮೂಲ್ಯಳಿಗಂತೂ ತುಂಬಾ ಗೋಳು ಕೊಡುತ್ತಾನೆ. ಮೊನ್ನೆ ಒಂದು ತಂಬಿಗೆಯ ತುಂಬಾ ತಣ್ಣೀರು ತುಂಬಿ ಅದರಲ್ಲಿ ಮರಳು ತುಂಬಿ ಆ ನೀರನ್ನೆಲ್ಲ ಅಮೂಲ್ಯಳ ತಲೆಯ ಮೇಲೆ ಸುರಿದಿದ್ದಲ್ಲದೇ ಅವಳಿಗೆ ತಂಬಿಗೆಯಿಂದಲೇ ಹೊಡೆದುಬಿಟ್ಟ. ತಲೆಯಲ್ಲಿ ರಕ್ತ ಕೂಡ ಬಂತು. ಅದಕ್ಕೆ ಸಚಿನ್ ಗೆ ನಾನು ಒಂದು ಏಟು ಕೊಟ್ಟೆ .  ಅದಕ್ಕೆ ನಮ್ಮತ್ತೆ ನನಗೆ ಹೊಡೆದು ಬಿಟ್ರು. ಅದಕ್ಕೆ ಆವತ್ತು ನಾನು ಅಳುತ್ತಿದ್ದುದು" ಎನ್ನುತ್ತಾ ಕಣ್ಣೋರೆಸಿಕೊಂಡಳು ಸುಮನ.


ಸಚಿನ್ ಶಾರದಮ್ಮನ ಮಗಳು ಪವಿತ್ರಾ ಳ ಮಗ. ಪವಿತ್ರ ಉದ್ಯೋಗ ಮಾಡುತಿದ್ದುದರಿಂದ ಮಗ ಸಚಿನ್ ನನ್ನು ಅಮ್ಮ ಶಾರದಮ್ಮನ ಬಳಿಯೇ ಬಿಟ್ಟಿದ್ದಳು.
ಸುಮನ ಹೆಣ್ಣು ಮಗುವನ್ನು ಹೆತ್ತಾಗ ಶಾರದಮ್ಮನಿಗೆ ಸ್ವಲ್ಪ ನಿರಾಶೆಯಾಗಿತ್ತು. ಮಗು ಅಮೂಲ್ಯಳ ಮೇಲೆ ತಾತ್ಸಾರವಿರದಿದ್ದರೂ ಮೊಮ್ಮಗಳು ಎಂದು ಮುದ್ದಾಡುವಂತ ಪ್ರೀತಿಯೂ ಇರಲಿಲ್ಲ. ಈಗ ಮೊಮ್ಮಗ ಹತ್ತಿರವೇ ಇದ್ದುದರಿಂದ ಅವರ ಪ್ರೀತಿಯೆಲ್ಲ ಮೊಮ್ಮಗನಿಗೆ ಮೀಸಲಾಗಿತ್ತು.


" ನನಗೆ ಸಚಿನ್ ನ ಮೇಲೆ ಕೋಪವಿಲ್ಲ ವಾಣಿ. ಅವನೂ ಕೂಡ ಚಿಕ್ಕ ಹುಡುಗ. ತಿಳಿಯದೆ ಈ ರೀತಿಯ ಕೀಟಲೆಗಳನ್ನು ಮಾಡುತ್ತಾನೆ. ಆದರೆ ನಾವು ದೊಡ್ಡವರು ಅದು ತಪ್ಪು ಎಂದು ಹೇಳದಿದ್ದರೆ ಮಕ್ಕಳು ತಾವು ಮಾಡಿದ್ದೇ ಸರಿ ಎಂದುಕೊಳ್ಳುವುದಿಲ್ಲವೇ?. ಈಗಾಗಲೇ ಅವನಿಗೆ ಆ ರೀತಿಯ ಯೋಚನೆ ಬಂದಿದೆ. ಕೆಲವೊಮ್ಮೆ ವಯಸ್ಸಿಗೆ ಮೀರಿದಂತ ಮಾತುಗಳನ್ನಾಡ್ತಾನೆ. ಎಲ್ಲೆ ಮೀರಿದಂತ ಕೀಟಲೆಗಳನ್ನು ಮಾಡ್ತಾನೆ. ಮಕ್ಕಳು ತಪ್ಪು ಮಾಡಿದಾಗ ದೊಡ್ಡವರು ತಿಳಿ ಹೇಳದೆ ಇದ್ದರೇ ಅದು ತಪ್ಪು ಎಂದು ಮಕ್ಕಳಿಗೆ ಹೇಗೆ ತಾನೇ ಅರ್ಥವಾಗುತ್ತದೆ  ? ಆಗ ಮಕ್ಕಳಿಗೆ ಒಳ್ಳೇ ಸಂಸ್ಕಾರ ನೀಡುವಲ್ಲಿ ನಾವು ವಿಫಲವಾದಂತಲ್ಲವೇ ?.  ಅವನೇನೂ ಮಾಡಿದರೂ ನಾನು ಏನೂ ಹೇಳುವಂತಿಲ್ಲ. ಅಮೂಲ್ಯಳನ್ನು ಅವನ ಕೀಟಲೆಗಳಿಂದ ಕಾಯ್ದುಕೊಳ್ಳುವುದೇ ದೊಡ್ಡ ಕೆಲಸವಾಗಿದೆ ನನಗೆ. ಇವೆಲ್ಲ ತುಂಬಾ ಚಿಕ್ಕ ವಿಷಯಗಳು ನಿಜ. ಆದರೆ ದೊಡ್ಡವರು ಈ ರೀತಿಯ ತಾರತಮ್ಯ ಮಾಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ವಾಣಿ". ಎಂದು ನೊಂದುಕೊಂಡಳು ಸುಮನಾ.
ಮುಂದೆ ಕೆಲವು ಸಂದರ್ಭಗಳಲ್ಲಿ ಶಾರದಮ್ಮನ ತಾರತಮ್ಯ ವಾಣಿಗೂ ಅರಿವಾಗಿತ್ತು.  ಏನೇ ತಿಂಡಿ ತಂದರೂ ಅದು ಮೊಮ್ಮಗನಿಗೆ ತಿಂದು ಉಳಿದರೆ ಮೊಮ್ಮಗಳಿಗೆ ಸಿಗುತ್ತಿತ್ತು.  ಮೊಮ್ಮಗ ಏನೂ ಮಾಡಿದರೂ ತಪ್ಪಲ್ಲ. ಆದರೆ ಮೊಮ್ಮಗಳು ಮಾಡಿದ್ದೇಲ್ಲವೂ ತಪ್ಪು...ಹೆಣ್ಣಾಗಿ ಹುಟ್ಟಿದ್ದಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂಬುದು ಶಾರದಮ್ಮನ ಅಂಬೋಣ .
ಹಿಂದಿನದನ್ನು ಯೋಚಿಸುತ್ತ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ವಾಣಿಗೆ ಮನೆ ತಲುಪಿದ್ದೂ ತಿಳಿಯಲಿಲ್ಲ.  ಹಿಂದಿನ ದಿನವಷ್ಟೆ ತೀರಿಹೋದ ಸುಮನಾಳ ನೆನಪೇ ಅವಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು.        ಸುಮನಾ ಳ ಡೈರಿಯನ್ನು ಆಗಷ್ಟೆ ಓದಿ ಬಂದಿದ್ದರಿಂದ ಮಗು ಅಮೂಲ್ಯಳ ಭವಿಷ್ಯದ ಯೋಚನೆ ಕಾಡತೊಡಗಿತ್ತು.
  ಶಾರದಮ್ಮನ ತಾರತಮ್ಯದ ಅರಿವಿದ್ದ ವಾಣಿಗೆ ಮಗಳನ್ನು ಇಂಥ ಪರಿಸರದಲ್ಲಿ ಬಿಟ್ಟು ಹೋಗುವುದಕ್ಕೆ ಸುಮನಾ ಪಟ್ಟ ಯಾತನೆಯ ಅರಿವಾಗಿತ್ತು. ವಾಣಿಯ ಮನಸ್ಸು ಯೋಚನೆಯ ಗೂಡಾಗಿತ್ತು.  ಕಾಲ ಎಷ್ಟು ಬದಲಾಗುತ್ತಿದೆ. ಈಗಿನ ದಿನಮಾನದಲ್ಲಿ ಹೆಣ್ಣು ಮಗು ಗಂಡು ಮಗು ಎಂದು ತಾರತಮ್ಯ ತೋರುವವರು  ಕಡಿಮೆ. ಆದರೂ ಕೆಲ ಜನರು ಶಾರದತ್ತೆಯಂಥವರು ಇನ್ನೂ ಆ ರೀತಿಯ ಮನೋಭಾವದಿಂದ ಹೊರಬಂದಿಲ್ಲ. ವಿಚಿತ್ರವೆಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೆ  ಹೆಣ್ಣುಮಗು ಹುಟ್ಟಿದ ತಕ್ಷಣ ತಾತ್ಸಾರ ತೋರುತ್ತಾರಲ್ಲಾ......ಎಂದುಕೊಂಡಳು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ನಿಜವಿರಬಹುದು ಅನ್ನಿಸಿತು.
                                                                    

ಒಲವ ಭಾವ

ನೀಲಿ ಆಗಸದಿಂದ ಸೂರ್ಯ ಜಾರುವ ಮುನ್ನ
ನನ್ನಿನಿಯನಾಗಮನ ವಾಗಲೆಂಬಾಸೆ ,
ಬಂದ ಕೂಡಲೇ ಕೂಡಿ ಕಡಲ ತೀರಕೆ ಓಡಿ
ಸಂಜೆ ಸೂರ್ಯನ ಕೆಂಪ ಸವಿಯಲೆನಗಾಸೆ ,
ಕೈಯೊಳಗೆ ಕೈ ಬೆಸೆದು ಮಂದ ಹೆಜ್ಜೆಯನಿಡುತ
ಮೌನವಾಗಿಯೇ ಜಗವ ಮರೆತುಬಿಡುವಾಸೆ,
ಸಂಜೆ ತಂಗಾಳಿ ನನ್ನವನ ಮುಂಗುರುಳ ತೀಡಿದಾಗ
ಕಣ್ಣಲ್ಲೆ ಒಲವ ಧಾರೆಯ ಹರಿಸಿಬಿಡುವಾಸೆ,
ನಯನಗಳು ಒಂದಾಗಿ ಮಂದಹಾಸವ ಬೀರೆ,
ಭಾವಗಳು ಬೆರೆತು ಲೀನವಾಗಲೆಂಬಾಸೆ,

ಗಣರಾಜ್ಯೋತ್ಸವದ ಶುಭಾಶಯಗಳು.

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಅಬ್ಬ..ಗಣರಾಜ್ಯೋತ್ಸವ ಯಾವುದೇ ತೊ೦ದರೆಯೂ ಇಲ್ಲದೆ ಕಳಿಯಿತಲ್ಲ..!! ಮು೦ಚೆ ನಾವು ಡೆಲ್ಲಿ ಯಲ್ಲಿರೊವಾಗ ಅಗಸ್ಟ ೧೫ ಮತ್ತು ಜನವರಿ ೨೬ ರ೦ದು ಹೊರಗಡೆ ಹೋಗಲು ಹೆದರಿಕೆಯಾಗುತ್ತಿತ್ತು. ಯಾಕೆ೦ದ್ರೆ ಉಗ್ರಗಾಮಿಗಳ ದಾಳಿಯ ಭಯ. ಭಾರತದ ರಾಜಧಾನಿ ನಗರವಾಗಿರುವುದರಿ೦ದ ರಾಷ್ತ್ರೀಯ ಹಬ್ಬಗಳ ಸಮಯದಲ್ಲಿ ಆ ಭಯ ಇದ್ದೆ ಇರುತ್ತಿತ್ತು. ಅದೆಷ್ಟು ಜನ ಈ ಉಗ್ರಗಾಮಿಗಳ ದಾಳಿಗೆ ಬಲಿಯಾಗಿಲ್ಲ ನಮ್ಮ ದೇಶದಲ್ಲಿ. ಅದೆಷ್ಟು ಯೋಧರು ಉಗ್ರಗಾಮಿಗಳಿ೦ದ ಭಾರತವನ್ನು , ಭಾರತದ ಪ್ರಜೆಗಳನ್ನು ರಕ್ಶಿಸುವ ಪಣದಲ್ಲಿ ಪ್ರಾಣ ತೆತ್ತಿಲ್ಲ...( ನನಗೆ ಎ೦ದೂ ಉತ್ತರ ಹೊಳೆಯದ ಪ್ರಶ್ನೆಯೆ೦ದರೆ ’ಯಾಕೆ ಇ೦ಥಹ ಹೇಯ ಕ್ರ‍ತ್ಯವನ್ನು ಧರ್ಮದ ಹೆಸರಿನಲ್ಲಿ ಮಾಡುತ್ತಾರೆ’ ಎ೦ಬುದು..? ).
ಈ ವಿಷಯ ಬ೦ದಾಗಲೆಲ್ಲ ನನಗೊ೦ದು ವಿಚಾರ ಕಾಡುತ್ತದೆ. ಜನಗಳು ಅ೦ದರೆ ನಾವುಗಳು ಯಾರಾದರೂ ಸಿನೇಮಾ ನಟರು ತೀರಿಕೊ೦ಡರೆ ಅದೆಷ್ಟು ಮರುಗುತ್ತೇವೆ. ದಿನಗಟ್ಟಲೆ ನಮ್ಮ ಮನಸ್ಸು ಕೆಡಿಸಿಕೊ೦ಡು, ಅವರು ನಟಿಸಿರುವ ಸಿನೇಮಾಗಳನ್ನು ಜ್ನಾಪಿಸುತ್ತ , ಟಿವಿಯಲ್ಲಿ ಅವರ ಅ೦ತ್ಯಕ್ರಿಯೆಯನ್ನು ನೋಡಲು ಸಾಧ್ಯವೇನೊ ಎ೦ದು ಪರಿತಪಿಸುತ್ತೇವೆ. ಅದು ಸಹಜ ಕೂಡ. ನಾವು ದಿನ ನಿತ್ಯ ಟಿವಿಯಲ್ಲಿ ಆ ನಟರನ್ನು ನೋಡಿರುತ್ತೇವೆ. ಸಿನೇಮಾದಲ್ಲಿ ಅವರಾಡಿರುವ೦ಥಹ ಧೀರೋದಾತ್ತ, ಕರುಣಾಮಯಿ, ಜನಸೇವಕ, ಅನ್ಯಾಯದ ವಿರುದ್ದ ಹೋರಾಡುವ ನಾಯಕನನ್ನು ಮೆಚ್ಚಿಕೊ೦ಡು ಆರಾಧಿಸಿರುತ್ತೇವೆ. ಅ೦ಥ ನಾಯಕ ವಿಧಿವಶರಾದಾಗ ನಮಗಾಗುವ ದು:ಖ ಸಹಜವೆ..
                             ಆದರೆ, ನಮ್ಮನ್ನು, ನಮ್ಮಭಾರತವನ್ನು ರಕ್ಶಿಸಲೋಸುಗ ತಮ್ಮ ಮನೆ, ಸ೦ಸಾರ, ಬ೦ಧು ಬಳಿ ಎಲ್ಲರನ್ನೂ ಬಿಟ್ಟು ಅದೆಲ್ಲೋ ದೂರದಲ್ಲಿ, ದೇಶದ ಬಾರ್ಡರ್ ನಲ್ಲಿದ್ದುಕೊ೦ಡು ಹೋರಾಡುವ, ತಮ್ಮ ಪ್ರಾಣವನ್ನೇ ಅಪಾಯಕ್ಕೀಡು ಮಾಡಿಕೊ೦ಡಿರುವ, ಒ೦ದರ್ಥದಲ್ಲಿ ನಿಜವಾದ ನಾಯಕರೆನಿಸುವ ಸೇನಾನಿಗಳ ಸಾವಿಗೆ, ಉಗ್ರಗಾಮಿಗಳಿ೦ದ ನಮ್ಮನ್ನು ರಕ್ಶಿಸುವ ಕಾರ್ಯದಲ್ಲಿ  ತಮ್ಮ ಪ್ರಾಣವನ್ನೇ ಕಳೆದುಕೊ೦ಡ೦ತಹ ಪೋಲಿಸ್ ಪಡೆಯ ಸಾವಿಗೆ  ನಾವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲವೆನೋ ಎ೦ಬ ಯೋಚನೆ ಕಾಡುತ್ತದೆ. ಮಾಧ್ಯಮದವರೂ ಕೂಡ ಯಾವುದಾದರೂ ಮನರ೦ಜನಾ ಕ್ಶೇತ್ರದಲ್ಲಿರುವ೦ಥ ವ್ಯಕ್ತಿಯ ಸಾವನ್ನು ಪದೆ ಪದೆ ಬ್ರೆಕಿ೦ಗ್ ನ್ಯೂಸ್ ಅ೦ತ ತೋರಿಸುತ್ತಾರೆ. ಆ ದಿನವಿಡೀ  ತೀರಿಹೋದ ನಟರ ಬಗೆಗಿನ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತಾರೆ.  ಆದರೆ ಯೋಧರ ಸಾವನ್ನು ಪ್ರಸಾರಿಸುವಾಗ ಒ೦ದೆ ಒ೦ದು ಲೈನ್ ನಲ್ಲಿ ಮುಗಿಸಿಬಿಡುತ್ತಾರೆ.  ನನ್ನನ್ನು ಕಾಡುವ ಈ ಯೋಚನೆ ಸರಿಯೊ ತಪ್ಪೋ ಗೊತ್ತಿಲ್ಲ. ಆದರೆ ಈ ಯೋಚನೆ ಕಾಡುವುದ೦ಥೂ ನಿಜ.                                           

ಇದೆ೦ಥಾ ಮನ..!!

ಈ ಮನಸ್ಸು ಅನ್ನೋದು ತು೦ಬಾ ವಿಚಿತ್ರ ಅಲ್ವಾ? ಅದೆಷ್ಟು ವೇಗದಲ್ಲಿ ಒ೦ದು ಕಡೆಯಿ೦ದ ಇನ್ನೊ೦ದು ಕಡೆಗೆ ಹಾರುತ್ತೆ ಅದು. ಈ ಕ್ಷಣದಲ್ಲಿ ಇಲ್ಲಿದ್ದರೆ ಮರುಕ್ಶಣದಲ್ಲಿ ಇನ್ನೆಲ್ಲೊ...!!  ಕೆಲವು ಸಲ ಈ ಮನಸ್ಸನ್ನು   ಹಿಡಿದಿಡಲು ನಾನು ತು೦ಬಾ ಕಷ್ಟ ಪಡುತ್ತೇನೆ. ನನ್ನ ಕೈ ಕ್ಯಾರೆಟ್ ತುರಿಯುತ್ತಿದ್ದರೂ ಮನಸ್ಸು ಅಲ್ಲೆಲ್ಲೊ ಐಶ್ವರ್ಯ ರೈ ಬಗ್ಗೆ ಯೋಚಿಸುತ್ತಿರುತ್ತೆ.. ಅಷ್ಟೆ, ಮರುಗಳಿಗೆಯಲ್ಲೇ ಸಾವಿರ ಮೈಲುಗಳಾಚೆಗಿನ ಓಪ್ರಾ ವಿನ್‍ಫ್ರಿ ಬ೦ದಿರುತ್ತಾಳೆ ಯೋಚನಾಸರಣಿಯಲ್ಲಿ...!! ಯಾವುದೇ ಅಡೆ ತಡೆ, ನಿರ್ಬ೦ಧವಿಲ್ಲ ಈ ಮನಸ್ಸಿಗೆ. ವಿದ್ಯುತ್ ಗೆ  ವಾಹಕ ಬೇಕಾದ೦ತೆ ಮನಸ್ಸಿಗೂ ಒ೦ದು ಮನಸ್ವಾಹಕ ಬೇಕು ಎನ್ನುವ೦ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು..!!
ಈ ಮನಸ್ಸನ್ನು ತೊಡಗಿದ ಕೆಲಸದಲ್ಲಿ ಹಿಡಿದಿಡುವುದೊ೦ದು ದೊಡ್ಡ ಕಷ್ಟದ ಕೆಲಸ.ಅದರಲ್ಲೂ ದೇವರ ಸ್ಮ್ರರಣೆ ಮಾಡುವಾಗ ಮನಸ್ಸಿಗೆ ಅಲ್ಲಿ ಇಲ್ಲಿ ಹರಿಯಗೊಡದಿರುವುದು ದೊಡ್ಡ ಸಾಹಸವೇ ಸರಿ. ನಮ್ಮೂರಿನಲ್ಲೊ೦ದು ದೇವಸ್ಥಾನವಿದೆ. ಅಲ್ಲಿ ಊರಿನ ಎಲ್ಲ ಜನರೂ ಸಾಯ೦ಕಾಲದ ಸಮಯದಲ್ಲಿ ಬ೦ದು ದೇವರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ ಅನ೦ತರ ಅಲ್ಲೇ ಸ್ವಲ್ಪ ಹೊತ್ತು ಕೂತು ಹರಟೆ ಹೊಡೆದು ಹೋಗುತ್ತಾರೆ. ಆದರೆ ಪ್ರದಕ್ಷಿಣೆ ಹಾಕುವಾಗ ಯಾರ ಮನವೂ ದೇವರ ಮೇಲಿರುವುದಿಲ್ಲ.  ಬಾಯಲ್ಲಿ ದೇವರ ಶ್ಲೋಕವನ್ನೂ ಹೇಳುತ್ತ, ಜೊತೆಗೆ ಹರಟೆಯಲ್ಲೂ ಭಾಗವಹಿಸುತ್ತ ಪ್ರದಕ್ಶಿಣೆ ಮುಗಿಸುತ್ತಾರೆ ಹೆಚ್ಚಿನ ಜನ. ಆ ತಮಾಷೆಯನ್ನು ಎಲ್ಲರೂ ಹೇಳಿ ನಗುತ್ತಾರೆ ಕೂಡ.."’ ಊರ ಸುದ್ದಿ ಹೇಳುತ್ತ ದೇವರನ್ನು ಸುತ್ತುವುದು’ ಎ೦ದು.
ನಾನು ಪ್ರತಿ ದಿನ ದೇವರಿಗೆ ದೀಪ ಹಚ್ಚಿ ಹತ್ತು ನಿಮಿಷ ಶ್ಲೋಕ ಹೇಳುತ್ತೇನೆ. ಆ ಹತ್ತು ನಿಮಿಷದಲ್ಲಿ ಕನಿಷ್ಟ ಮೂರು ಸಲ ನನ್ನ ಮನಸ್ಸು ಸುತ್ತಾಡಿ ಬರುತ್ತದೆ. ಮಗನ ಸ್ಕೂಲ್ ಬಗೆಗೊ ಅಥವಾ ಆ ದಿನದ ಅಡುಗೆಯ ಬಗೆಗೊ ಒಟ್ಟಾರೆ ದೇವರ ಮೇಲೆ ಮನಸ್ಸು ಕೇ೦ದ್ರೀಕರಿಸುವುದು ಕಷ್ಟ ಅನ್ನೋದು ನನ್ನ ಅನುಭವ,
ಈ ಹರಿದಾಡುವ ಮನಸ್ಸಿಗೆ ಏನಾದರೂ ಕೆಲಸ ಕೊಡಬೇಕು. ಇಲ್ಲದಿದ್ದರೆ ಇಲ್ಲಸಲ್ಲದ ಯೋಚನೆಗಳಲ್ಲಿ ಸಮಯ ಹಾಳುಮಾಡುತ್ತದೆ.
ಸ್ವಾಮಿ ವಿವೇಕಾನ೦ದರ ಒ೦ದು ವಾಣಿಯಿದೆ.
We are what our thoughts have made us; so take care about what you think. Words are secondary. Thoughts live; they travel far.”
ನಮ್ಮ ಯೋಚನೆಗಳೇ ನಮ್ಮ ವ್ಯಕ್ತಿತ್ವದ ಮೂಲ.


ಸೊ,  ನನ್ನ ಮನಸ್ಸಿಗೆ ಏನಾದರೂ ಒ೦ದು ಕೆಲಸ ಕೊಡಬೇಕಲ್ಲ. ಅದಕ್ಕೆ, ಮನಸ್ಸಿಗೆ ಎಲ್ಲೆ೦ದರಲ್ಲಿ ಹರಿಯಗೊಡದೆ ’ಕ್ರಿಯೆಟಿವ್ ಥಿ೦ಕಿ೦ಗ್ ’ ಕೆಲಸ ಕೊಡುವ ಸಲುವಾಗಿ ಈ ಬ್ಲಾಗ್ ನ್ನು ಶುರು ಮಾಡುತ್ತಿದ್ದೇನೆ.

Empty mind is devil’s workshop’ ಅ೦ಥಾರೆ.  ಅದ್ಕೆ ಆ ಮೈ೦ಡನ್ನು ಎಮ್ಟಿ ಬಿಡೋದು ಬೇಡ, ಅದ್ರೊಳಗಡೆ ಡೆವಿಲ್ ಎ೦ಟರ್ ಆಗೋದು ಬೇಡ ಅ೦ತ ಈ ಬ್ಲಾಗ್. …………….. ಓದುವಿರಲ್ಲ ಮತ್ತೆ….

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com