ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಪ್ರೀತಿಯ ತಂಗಿಗೆ ಶುಭ ಹಾರೈಕೆ.

ನಾಳೆ ನನ್ನ  ಪ್ರೀತಿಯ ತಂಗಿಯ ಮದುವೆ . ಅವಳ ಬಾಳಿಗೊಂದು ಸಂಗಾತಿ ಬಂದು ಹೊಸ ಜೀವನ ಪ್ರಾರಂಬಿಸುವ,  ಜೀವನದಲ್ಲಿ ಒಮ್ಮೆ ಮಾತ್ರ ಬರುವಂತ ಅತಿ ಮುಖ್ಯ ದಿನ . ಆದ್ರೆ ನನಗೆ ಈ ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ತುಂಬಾ ಬೇಜಾರೆನಿಸುತ್ತಿದೆ.  ನನ್ನ ಮನಸೆಲ್ಲ ಮದುವೆ ಮನೆಯಲ್ಲೇ ಇದೆ. ತಾಸಿಗೊಮ್ಮೆ ಫೋನ್ ಮಾಡಿ ಇಲ್ಲಿಂದಲೇ ಮದುವೆಯಲ್ಲಿ ಪಾಲ್ಗೊಳ್ಳುವ ಸಣ್ಣ ಪ್ರಯತ್ನಮಾಡ್ತಾ ಇದೀನಿ.

ಈಗಿನ್ನೂ ನನ್ನ ತಂಗಿಯನ್ನು (ಚಿಕ್ಕಪ್ಪನ ಮಗಳು) ಎತ್ತಿ ಮುದ್ದಾಡುತ್ತಾ ಊರೆಲ್ಲ ತಿರುಗಿಸುತ್ತಿದ್ದ ದೃಶ್ಯ ಕಣ್ ಮುಂದೆಯೇ ಇದೆ. ಒಂದೇ ಮನೆಯಲ್ಲಿ ಒಟ್ಟಾಗಿ ಬೆಳೆಯುವಾಗ ಆಡಿದ ಆಟ, ಆಟದ ನಂತರದ ಜಗಳ, ಜಗಳದ ನಂತರ ಮತ್ತೆ ಒಂದಾಗುವುದು..ಆ ದಿನಗಳು ಇನ್ನೇಂದೂ ಬರಲಾರವು ಎಂಬ ಯೋಚನೆ ನೋವು ಕೊಡುತ್ತದೆ.   ಕ್ಷಣಗಳು, ದಿನಗಳು, ವರ್ಷಗಳು ಅದೆಷ್ಟು ಬೇಗ ಜಾರಿ ಹೋಗುತ್ತಿವೆ. ವರ್ಷಗಳು ಕ್ಷಣಗಳಂತೆ ಹಾರಿ ಹೋಗುತ್ತಿವೆಯೇನೋ ಅನಿಸುತ್ತೆ ಒಮ್ಮೊಮ್ಮೆ. ಬಾಲ್ಯದ ದಿನಗಳ ನೆನಪು ಗ್ಲುಕೋಸ್ ಇದ್ದಂಗೆ. ಮನಸ್ಸಿನ ಬೇಜಾರನ್ನು ಕ್ಷಣದಲ್ಲಿ ಮಾಯಾವಾಗಿಸಿ ಮುಖದಲ್ಲಿ ನಗು ಮೂಡಿಸುತ್ತವೆ. ಆ ದಿನಗಳ ಕೆಲ ಮುದ ನೀಡುವ ವಿಷಯಗಳನ್ನ ಬರೆಯಬೇಕೆನಿಸಿದೆ.

ನಮ್ಮೂರಲ್ಲಿ ಹಾಡುಗಾರರ ಹಾವಳಿ ಸ್ವಲ್ಪ ಜಾಸ್ತಿ ಇತ್ತು. ನಮ್ಮನೆಯಲ್ಲಿ ಇನ್ನೂ ಸ್ವಲ್ಪ ಜಾಸ್ತಿ. ನಾನು ಹೈಸ್ಕೂಲ್ ಕಲಿಯುತ್ತಿದ್ದ ದಿನಗಳು. ಒಂದು ದಿನ ನಾನು ಸುಮ್ನೆ ಒಂದು ಹಾಡು ಗುನುಗುತ್ತಿದ್ದೆ (ಸ್ವಲ್ಪ ಜೋರು ಸ್ವರದಲ್ಲೇ.) 
  " ಆಕಾಶದಾಗೆ ಯಾರೋ ಮಾಯಗಾರನೋ, ಈ ಭೂಮೀ ಮಾಡಿ ಹೋಗವ್ನೆ ಏ ಏ ಏ ಏ ಏ......ಈ ಭೂಮೆ ಮ್ಯಾಗೆ ಯಾರೋ ತೋಟಗಾರನೋ, ಮಲೆನಾಡ ಮಾಡಿ ಹೋಗವ್ನೆ ಏ ಏ ಏ ಏ ಏ ... ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾ ಬಾರಾ ಆ ಆ ಆ ಆ.........      ಗೊತ್ತಾಗಿರ್ಬೇಕಲ್ಲ ಹೇಗೆ ಹಾಡಿದ್ದೆ ಅಂತ..... ಯೆಸ್,   ಹಾಗೆ   ಆ ಆ ಆ ಆ ಆಂತ ಆಲಾಪ.  ನಂಗೆ ಮುಂದೆ ಬರೋದಿಲ್ಲ ಆ  ಹಾಡು, ಅದ್ಕೆ ಅಲ್ಲಿಗೆ  ನಿಲ್ಲಿಸ್ಲೆ ಬೇಕಾಯ್ತು.  ನನ್ನ ತಂಗಿಗೆ ಹಾಡಿನ ಪಲ್ಲವಿಯೂ ಬರ್ತೀತ್ತು ಅನಸತ್ತೆ....ಸರಿ ಶುರು ಮಾಡೇ ಬಿಟ್ಲು.  ಒಂದು ಪಲ್ಲವಿ ಆಯ್ತು. ಮುಂದಿನ ಸಾಲುಗಳು ಅವ್ಳಿಗೆ ಬರೋಲ್ಲ ಈಗ ಮುಗಿಸ್ತಾಳೆ ಅಂತ ಸಮಾಧಾನ ಪಡ್ತೀರೊವಾಗ್ಲೆ ಶುರು ಮಾಡೇ ಬಿಟ್ಲು ಮುಂದಿನ ಪಲ್ಲವಿ ಕೂಡ. ಆ  ಹಾಡು ಅವ್ಳಿಗೆ ಪೂರ್ತಿ ಬರುತ್ತೆ ಅಂತ ಗೊತ್ತಾದ ಮೇಲೆ ನಾನು decide ಮಾಡಿದ್ದೆ ಆ ಹಾಡನ್ನು ಇನ್ಯಾವತ್ತೂ ಹೇಳಬಾರದು ಅಂತ. ಅವಳು ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪಕ್ಕದ ಮನೆಯ ಸುವರ್ಣತ್ತಿಗೆ ಕೂಡ ಅದೇ ಹಾಡು ಶುರು ಮಾಡಿದಾಗ ನಾನು ಸುಸ್ತು. (ನಾನು ಹಾಡುವಾಗ ಕೂಡ  ಅವರೆಲ್ಲಾ ಸಹಿಸಿಕೊಳ್ಳುತ್ತಿದ್ದರು..ಅದು ಬೇರೆ ವಿಷಯ.)
ಒಂದು ದಿನ ಎಂದೂ ಯಾರಿಗೂ ಬಯ್ಯದ ನಮ್ಮಪ್ಪ, ಮಲಗಿದ್ದವರು ಎದ್ದು ಬಂದು ಹಾಡುತ್ತಿರುವ ನನ್ನ ಇನ್ನೊಂದು ತಂಗಿಗೆ 'ನೀನೀಗ ಬಾಯಿ ಮುಚ್ಚದಿದ್ದರೆ ನಿನ್ನ ಬಾಯಿಗೆ ಗಂ ಅಂಟಿಸಿಬಿಡುತ್ತೇನೆ' ಅಂದಾಗ  ತಂಗಿಯ ಮುಖ ಹುಳ್ಳಗಾಗಿದ್ದರೂ ನಾವೆಲ್ಲಾ ಮುಸಿ ಮುಸಿ ನಕ್ಕಿದ್ದೆವು.
ಇನ್ನೊಮ್ಮೆ  ನನ್ನ ಇನ್ನೊಬ್ಬ ತಂಗಿ ತುಂಬಾ ಜೋರು ಸ್ವರದಲ್ಲಿ ಹಾಡುತ್ತಿದ್ದಳು. ತಮಾಷೆಯ ಸ್ವಭಾವದ ನನ್ನ ಚಿಕ್ಕಪ್ಪ " ನೀನು ಅಷ್ಟು ಏರು ಸ್ವರದಲ್ಲಿ ಹಾಡುತ್ತಾ ಹೋದ್ರೆ ಆಮೇಲೆ ಇಳಿಸೋಕೆ ಒದ್ದಾಡ್ತೀಯ ..ನನ್ನತ್ರ ಇಳಿಸಿಕೊಡು ಅಂತ ಕೇಳಿದ್ರೆ ನಾನಂತೂ ಇಳಿಸೋಕೆ ಸಹಾಯ ಮಾಡಲ್ಲಾ" ಅಂದಾಗ ನಮಗೆಲ್ಲ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. 
(ನನ್ನ ತಂಗಿಯರು  ಚೆನ್ನಾಗೇ ಹಾಡ್ತಾರೆ. ಆದ್ರೆ ಎಲ್ಲರೂ ಹಾಡುಗಾರರಾಗಿದ್ದಕ್ಕೆ ಸ್ವಲ್ಪ ಕಷ್ಟವಾಗಿದ್ದು..!!)
ಹೀಗೆ ಇನ್ನೆಷ್ಟೊ ಘಟನೆಗಳು. ಬರೆಯುತ್ತಾ ಹೋದರೆ ದೊಡ್ಡ ಪುಸ್ತಕವೇ ಆದೀತು. ನಮ್ಮ ಮನೆಯವರೆಲ್ಲ ಸೇರಿದಾಗ ಇದೆಲ್ಲಾ ನೆನಪಿಸಿಕೊಂಡು ತುಂಬಾ ನಗುತ್ತೇವೆ. ಆ ದಿನಗಳು ಇನ್ನೆಂದೂ ಬರಲಾರವು. ಮತ್ತೆ ಬೇಕೆಂದು ಕೇಳಿದರೆ ದುರಾಸೆಯಾದೀತು. ಆ ನೆನೆಪುಗಳೇ ಸಾಕು ಮನಸ್ಸನ್ನು ಮುದಗೊಳಿಸಲು.

ಬಾಲ್ಯದ ನೆನಪು ಮುಖದಲ್ಲಿ ಮುಗುಳ್ನಗೆ ತಂದಿದೆ. ನಾವೆಲ್ಲ ಅಕ್ಕ ತಂಗಿಯರು ಒಬ್ಬರಿಂದೊಬ್ಬರು ದೂರದಲ್ಲಿದ್ದರೂ  ಮನಸ್ಸಿನಲ್ಲಿ ತುಂಬಾ ಹತ್ತಿರದಲ್ಲಿದ್ದೆವಲ್ಲಾ ..ಅಷ್ಟು ಸಾಕು.
ಹೊಸಜೀವನದ ಹೊಸಿಲಲ್ಲಿ ನಿಂತಿರುವ  ನನ್ನ ತಂಗಿ ರಚನಾ ಗೆ  ಮದುವೆಯ ಅನುಬಂಧ ಎಂದೂ ಮಧುರ ಅನುಭೂತಿಯನ್ನು ನೀಡುತ್ತಾ ಅವಳ ವೈವಾಹಿಕ ಜೀವನ ಸದಾ ಹರುಷದಿ ಹಸಿರಾಗಿರಲಿ ಎಂದು ಮನತುಂಬಿ ಹಾರೈಸುತ್ತೇನೆ.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊಸ ಜೋಡಿಗೆ
ಜೀವನದ ತುಂಬೆಲ್ಲ ಹರುಷ ತುಂಬಿರಲಿ.....
ಸರಸ ಸಲ್ಲಾಪದ ಮಳೆ ಸುರಿಯಲಿ
ಪ್ರೇಮಾನುರಾಗಗಳು ಮನದಲ್ಲಿ ಮನೆ ಮಾಡಲಿ
ಮದುವೆಯ ಈ ಬಂಧ ಸದಾ ಸಂತೋಷದಿ ಹಸಿರಾಗಿರಲಿ.

11 comments:

Ranjita April 8, 2010 at 8:54 AM  

ರಚನಾ ಮದ್ವೆ ಗೆ ನಂಗು ಹೋಗಲಾಜಿಲ್ಲೇ ..ನಿನ್ನೆಯಿಂದ ತಲೆಯೆಲ್ಲ ಮದುವೆಮನೆಯಲ್ಲೇ .. :(
ಅಕ್ಕಂದಿರಾಗಿ ನಾವು ಇಲ್ಲಿಂದಲೇ ಶುಭ ಹಾರೈಸೋಣ ...

ಇನ್ನು ಹಾಡಿನ ಕತೆ ..ಆವತ್ತು ಹಾಡು ಹೇಳಿ ಅಪ್ಪನತ್ರ ಬೈಸ್ಕೊಂಡ್ ಸಾಹಸಗರ್ತಿ ಅದು ನಾನೇ ಅಂತ ಹೆಮ್ಮೆಯೀಂದ ಹೇಳ್ಕ್ಯತ್ತಿ ಹ್ಹೀ ಹ್ಹೀ ಹ್ಹೀ ..

V.R.BHAT April 9, 2010 at 7:02 AM  

chennagide nimma haaraike jotege nammadoo kooda !

ಮನಸಿನಮನೆಯವನು April 10, 2010 at 1:20 AM  

ಓ ಮನಸೇ, ನೀನೇಕೆ ಹೀಗೆ...? ಅವ್ರೆ..,

ನಿಮ್ಮ ತಂಗಿಗೆ ಶುಭ ಹಾರೈಕೆಗಳು..
ಶುಭವಾಗಲಿ..

ಓ ಮನಸೇ, ನೀನೇಕೆ ಹೀಗೆ...? April 10, 2010 at 10:11 AM  

ಥ್ಯಾಂಕ್ಸ್ ರಂಜಿತ.
V.R. Bhat ಸರ್, ಗುರು ದೆಸೆ , ನಿಮ್ಮ ಶುಭ ಹಾರೈಕೆಗೆ ಹಾಗೂ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ಚುಕ್ಕಿಚಿತ್ತಾರ April 10, 2010 at 8:53 PM  

ನಿಮ್ಮ ನೆನಪುಗಳ ತು೦ತುರು ಹನಿ ಮಧುರವಾಗಿದೆ ನಮಗೂ...
ನಿಮ್ಮ ತ೦ಗಿಯ ಮದುವೆಗೆ ನಮ್ಮದೂ ಶುಭಹಾರೈಕೆಗಳು...

ಸಾಗರದಾಚೆಯ ಇಂಚರ April 13, 2010 at 4:08 AM  

ನಿಮ್ಮ ತಂಗಿಯ ಮದುವೆಗೆ ನಮ್ಮಿಂದಲೂ ಶುಭ ಹಾರೈಕೆ

ಓ ಮನಸೇ, ನೀನೇಕೆ ಹೀಗೆ...? April 13, 2010 at 8:13 AM  

ಚುಕ್ಕಿ ಚಿತ್ತಾರ , ಸಾಗರದಾಚೆಯ ಇಂಚರ ನಿಮ್ಮ ಶುಭ ಹಾರೈಕೆಗೆ ತುಂಬ ಧನ್ಯವಾದಗಳು.

ಜಲನಯನ April 13, 2010 at 8:48 AM  

ರಚನಾ ಗೆ ನಮ್ಮೆಲ್ಲರ ವತಿಯಿಂದ ವೈವಾಹಿಕ ಜೀವನದ ವಾರ್ಷಿಕೋತ್ಸವಕ್ಕೆ ಶುಭಾಷಯಗಳು...ದೇವರು ಅವರ ಜೀವನ ಸುಖ ಸಂಪತ್ತಿನಲ್ಲಿ ಓಲಾಡಲಿ...ಎಂದು ಹಾರೈಕೆ ಪ್ರಾರ್ಥನೆ...
ಅಂದಹಾಗೆ ರಂಜು ಸೀಕ್ರೇಟ್ ..ಗೊತ್ತಾಯ್ತು...ಅವ್ಳಿಗೆ ಮುಂದಿನ ಸರ್ತಿ ಸಿಕ್ಕಾಗ ಹಾಡಿಸ್ದೇ ಬಿಡೋಲ್ಲ...ಹಹಹ...
ನಿಮ್ಮ ಅಕ್ಕ ತಂಗಿಯರ ಅನ್ಯೋನ್ಯತೆಗೆ ನಮ್ಮ ಗೊಬ್ಬರ ನೀರು...ಹಹಹ
ಬಹಳ ಚನ್ನಾಗಿ ಘಟನೆಗಳನ್ನ ಹೆಣೆದಿದ್ದೀರಿ...

ವನಿತಾ / Vanitha April 14, 2010 at 2:12 PM  

ಜಲನಯನ ಬ್ಲಾಗ್ ಮೂಲಕ ಇಲ್ಲಿ ಬಂದೆ..ಆವಾಗ ಗೊತ್ತಾಯ್ತು ಅಕ್ಕ-ತಂಗಿ ಸಂಗೀತದ ಬಗ್ಗೆ (btw I know Ranjita)..:).ನಿಜವಾಗಲೂ ಎಷ್ಟೊಂದು ಮಿಸ್ ಮಾಡ್ಕೊಳ್ತೇವೆ ಅಲ್ವ ಊರಿನ functionಗಳನ್ನು.ನಿಮ್ಮ ರಚನಾಗೆ ನಮ್ಮೆಲ್ಲರ Good Wishes:)

ಓ ಮನಸೇ, ನೀನೇಕೆ ಹೀಗೆ...? April 15, 2010 at 7:37 AM  

ನಮಸ್ತೇ ವನಿತ ಅವ್ರೆ , ನಿಮ್ಮನ್ನು ಇಲ್ಲಿ ಭೇಟಿಯಾಗಿದ್ದು ಸಂತೋಷವಾಯ್ತು. ಹೌದು..ನಾವು ಎಲ್ಲಾ ಫಂಕ್ಷನ್ ಗಳನ್ನ ಮಿಸ್ ಮಾಡ್ಕೊತೇವಲ್ಲ. ಆದ್ರೆ ಒಂದು ಸಂತೋಷದ ವಿಷಯ ಅಂದ್ರೆ ಇಲ್ಲಿ ನಾವೆಲ್ಲ ಸೇರಿ ಒಂದು ಹೊಸ ಬಳಗವಾಗಿದ್ದೆವಲ್ಲ. ಅದು ಖುಷಿ ಅಲ್ವಾ.
ನಿಮ್ಮ ಶುಭಹಾರೈಕೆಗೆ ತುಂಬಾ ಧನ್ಯವಾದಗಳು.

ಹೆಸರು ರಾಜೇಶ್, May 11, 2010 at 11:46 AM  

ನಿಮ್ಮ ತಂಗಿಗೆ ನನ್ನ ಶುಭ ಹಾರೈಕೆ....ನೀವು ನಿಮ್ಮ ಬಾಲ್ಯದ ಅನುಬವವನ್ನು ತುಂಬಾ ಚೆನ್ನಾಗಿ ನೆನಪಿನಲ್ಲಿಟ್ಟಿದ್ದೀರ...ಅದನ್ನು ಅಷ್ಟೆ ತೀವರ್ವತೆಯಲ್ಲಿ ಬರೆಯಿರಿ. ಈ ಮೂಲಕ ನಮಗೂ ಕೂಡ ಹೆಣ್ಣು ಮಕ್ಕಳ ಮನೋ ಪ್ರಪಂಚದ ದರ್ಶನವಾದೀತು.....

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com